

ಬೀದರ್: ಸ್ಥಗಿತಗೊಂಡಿರುವ ಬೀದರ್-ಬೆಂಗಳೂರು ವಿಮಾನಯಾನ ಸೇವೆ ಮತ್ತೆ ಆರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ ಶೆಟಕಾರ್ ಹೇಳಿದರು.
ವಿಮಾನಯಾನ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಸೆ ವ್ಯಕ್ತಪಡಿಸಿದರು.
ದಶಕದ ಹೋರಾಟದ ಫಲವಾಗಿ ಬೀದರ್ನಲ್ಲಿ 2020ರಲ್ಲಿ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ಆರಂಭಗೊಂಡಿದ್ದು, ಬೀದರ್-ಬೆಂಗಳೂರು ನಡುವೆ ಸೇವೆ ನೀಡಲಾಗುತ್ತಿತ್ತು. ಆದರೆ ಪ್ರಯಾಣಿಕರ ನೆಪವೊಡ್ಡಿ ವರ್ಷದಲ್ಲೇ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಬೇಸರ ಹೊರಹಾಕಿದರು.
ಈಗಾಗಲೇ ಬೀದರ್ ಏರ್ಪೋಟ್೯ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಅವರನ್ನು ಪುನಃ ಇಲ್ಲಿಗೆ ನಿಯೋಜಿಸುವುದು ಕಷ್ಟಕರ ಕೆಲಸ. ಬೀದರ್ ಏರ್ಪೋಟರ್೯ ಗೆ ಐಎಟಿಎ ಸಂಸ್ಥೆಯಿಂದ ಐಕ್ಯೂ ಕೋಡ್ ಲಭಿಸಿರುತ್ತದೆ. ವಿಮಾನಯಾನ ಸೇವೆ ಸ್ಥಗಿತವಾದರೆ ಐಕ್ಯೂ ಕೋಡ್ ಸಹ ಅಮಾನ್ಯವಾಗುತ್ತದೆ. ಆದ್ದರಿಂದ ಯಾವ ಕಾರಣಕ್ಕೂ ಬೀದರ್ ವಿಮಾನಯಾನ ಕೈತಪ್ಪಿ ಹೋಗಬಾರದು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೇ ಪ್ರಯಾಣದ ಸಮಯ ಬದಲಾವಣೆ. ಬೆಳಗ್ಗೆ 6ರಿಂದ 7ಕ್ಕೆ ಬೀದರ್- ಬೆಂಗಳೂರು ಹಾಗೂ ಸಂಜೆ 7ರಿಂದ 8 ಬೆಂಗಳೂರು-ಬೀದರ್ ಗೆ ಕಾರ್ಯಾಚರಣೆ ಆಗಬೇಕು ಎಂದು ಹೇಳಿದರು.
ಜತೆಗೆ ಬೀದರ್ ನಿಂದ ಮುಂಬೈಗೆ ವಿಮಾನಯಾನ ಆರಂಭಿಸಬೇಕು. ಹೀಗಾದಾಗ ಇಲ್ಲಿನ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಹಾಗೂ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನುಕೂಲ ಜತೆಗೆ ಸಂಸ್ಥೆಗೂ ಲಾಭವಾಗಲಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ, ಸಹ ಕಾರ್ಯದರ್ಶಿ ರಾಜಶೇಖರ ಮಿಟಕಾರಿ, ಉಪಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಆಡಳಿತಾಧಿಕಾರಿ ಬಸವರಾಜ ಸ್ವಾಮಿ, ವೈಜಿನಾಥ ಪಾಟೀಲ್ ಇದ್ದರು.