

ಭಾಲ್ಕಿ: ಪಟ್ಟಣದ ಬೀದರ್ ಮುಖ್ಯ ರಸ್ತೆಯ ಅರ್ಬನ್ ಬ್ಯಾಂಕ್ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸಂಸದ ಸಾಗರ ಖಂಡ್ರೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಖಂಡ್ರೆ, ಪಟ್ಟಣದ ರೈಲ್ವೆ ಗೇಟ್ ಬಳಿ ಪ್ರತಿದಿನ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ರೈಲು ಓಡಾಟ ಹೆಚ್ಚಾಗಿದ್ದರಿಂದ ಪದೇಪದೆ ಗೇಟ್ ಹಾಕುತ್ತಿದ್ದು, ಆಸ್ಪತ್ರೆ, ತುರ್ತು ಕೆಲಸ ಇದ್ದವರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಕಾಳಜಿ ವಹಿಸಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೋರಿದ್ದಾರೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಖಂಡ್ರೆ ತಿಳಿಸಿದ್ದಾರೆ.