

ಬೀದರ್: ಪೊಲೀಸ್ ಠಾಣೆಗಳಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಯೋಜಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.
ಮಕ್ಕಳ ಹಕ್ಕುಗಳ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಪೊಲೀಸ್, ಜಿಲ್ಲಾ ಪಂಚಾಯಿತಿ ಇತರ ಇಲಾಖೆ ಸಹಯೋಗದಡಿ ಎಸ್ಪಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಿಷನ್ ವಾತ್ಸಲ್ಯ ಮತ್ತು ಮಕ್ಕಳ ರಕ್ಷಣಾ ನೀತಿ ಮತ್ತಿತರ ಕಾಯ್ದೆಗಳ ಕುರಿತು ಪೊಲೀಸ್ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಹಲವು ಕಾಯ್ದೆ, ಕಾನೂನು, ನಿಯಮಗಳಿವೆ. ಈ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ತಮಗಾಗಿ ಇರುವ ಕಾಯ್ದೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಮಕ್ಕಳು ಅನ್ಯಾಯ, ದೌರ್ಜನ್ಯ, ಹಲ್ಲೆ ವಿರುದ್ಧ ದೂರು ನೀಡಬಲ್ಲರು. ಈ ದಿಸೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಉಪಯುಕ್ತವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ತೆರೆದ ಮನೆ ಕಾರ್ಯಕ್ರಮವನ್ನು ಪೊಲೀಸ್ ಠಾಣೆಯಲ್ಲಿ ನಡೆಸಬಹುದು. ಮಕ್ಕಳಿಗೆ ಅನನುಕೂಲ ಆಗುವಂತಿದ್ದಲ್ಲಿ ಪೊಲೀಸ್ ಅಧಿಕಾರಿಗಳೇ ಶಾಲೆಗೆ ತೆರಳಿ ಕಾರ್ಯಕ್ರಮ ನಡೆಸಬಹುದು. ಠಾಣೆಯಲ್ಲಿ ಮಕ್ಕಳಸ್ನೇಹಿ ವಾತಾವರಣ ಇದ್ದಲ್ಲಿ ದೂರು ಕೊಡಲು ಮಕ್ಕಳು ಧೈರ್ಯ ಮಾಡುತ್ತಾರೆ ಎಂದರು.
ಠಾಣೆಗಳಲ್ಲಿ ಮಾಸ್ಟರ್ ರಿಜಿಸ್ಟರ್ ಇಡಬೇಕು. ಪೋಕ್ಸೋ, ಮಕ್ಕಳ ಕಣ್ಮರೆ ಪ್ರಕರಣಗಳ ಮಾಹಿತಿ ದಾಖಲಿಸಿರಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಇಲಾಖೆ, ಸಂಸ್ಥೆ, ಮಕ್ಕಳ ಹಕ್ಕು ರಕ್ಷಣಾ ಆಯೋಗ ಸದಸ್ಯರ ಮೊಬೈಲ್ ನಂಬರ್ ಇರುವ ಫಲಕ ಹಾಕಬೇಕು. ಮಕ್ಕಳ ಸಹಾಯವಾಣಿ 1098 ಮತ್ತು 112 ಎಲ್ಲರಿಗೂ ಕಾಣುವಂತೆ ಬರೆದಿರಬೇಕು ಎಂದು ಸಲಹೆ ನೀಡಿದರು.
ಭಾಲ್ಕಿ ತಾಲೂಕಿನ ಶಾಲೆಯೊಂದರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆಯೋಗದ ಸೂಚನೆ ನಂತರ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ ಸೇರಿಸಲಾಯಿತು. ಕಮಲನಗರ ತಾಲೂಕಿನ ಶಾಲೆಯೊಂದರಲ್ಲಿ ನಡೆದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಾಲನ್ಯಾಯ ಕಾಯ್ದೆ 2015ರ ಕಲಂ 107 ಮತ್ತು ಬಾಲನ್ಯಾಯ ಮಾದರಿ ನಿಯಮಗಳು 2016ರನ್ವಯ ಮಕ್ಕಳ ವಿಶೇಷ ಪೊಲೀಸ್ ಘಟಕದ ರಚನೆ, ಅನುಷ್ಠಾನದ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾಯ್ದೆ, ಕಾನೂನು ಮತ್ತು ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಬೇಕು. ಸಕಾಲದಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಮೂಲಕ ಅಧಿಕಾರಿಗಳು ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆ ತೋರಿಸಬೇಕು ಎಂದರು.
ಹೆಚ್ಚುವರಿ ಎಸ್ಪಿಗಳಾದ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಮಕ್ಕಳ ಹಿರಿಯ ವಿಶೇಷ ಪೊಲೀಸ್ ಕಲ್ಯಾಣಾಧಿಕಾರಿ ಶಿವನಗೌಡ ಪಾಟೀಲ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಧನಲಕ್ಷ್ಮೀ ಪಾಟೀಲ್, ಮಂಜುಳಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಾರದಾ ಕಲಮಲಕರ್ ಇತರರಿದ್ದರು. ಗೌರಿಶಂಕರ ಪರ್ತಾಪುರ ನಿರೂಪಣೆ ಮಾಡಿದರು. ಸಂಪನ್ಮೂಲ ವ್ಯಕ್ತಿ ಡಾ.ಕೆ. ರಾಘವೇಂದ್ರ ಭಟ್ ತರಬೇತಿ ನಡೆಸಿಕೊಟ್ಟರು.