ಮನ್ನಳ್ಳಿ ಗ್ರಾಪಂನಲ್ಲಿ ಅವ್ಯವಹಾರ

Veershetty Gouspure
Published on

ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2022-23 ಹಾಗೂ 2023-24ನೇ ಸಾಲಿನ 15ನೇ ಹಣಕಾಸು ನಿಧಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ವೇದಿಕೆಯ ಬೀದರ್ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಗೌಸಪುರೆ ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ನರೇಗಾ ಯೋಜನೆ ತಾಂತ್ರಿಕ ಸಂಯೋಜಕ ಹಾಗೂ ಕಂಪ್ಯೂಟರ್ ಆಪರೇಟರ್ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಖಾತ್ರಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿಲ್ಲ. ಖೊಟ್ಟಿ ಜಾಬ್ ಕಾರ್ಡ್‍ಗಳನ್ನು ಸೃಷ್ಟಿಸಿ, ಬೇರೆ ವ್ಯಕ್ತಿಗಳ ಖಾತೆಗಳಿಗೆ ಹಣ ಜಮೆ ಮಾಡಿ ಸರ್ಕಾರದ ಅನುದಾನ ಲೂಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 9 ರಂದು ಹಮ್ಮಿಕೊಂಡಿದ್ದ 15ನೇ ಹಣಕಾಸು ನಿಧಿ ಹಾಗೂ ಖಾತ್ರಿ ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿ ಸಾಕಷ್ಟು ಕಾಮಗಾರಿಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಸಭೆಯನ್ನು ರದ್ದುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net