

ಬೀದರ್: ನಗರದ ಜಿಲ್ಲಾ ಬಾಲ ಭವನದಲ್ಲಿ ಆಗಸ್ಟ್ 16 ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ತಾಲ್ಲೂಕುಮಟ್ಟದ ಕರಾಟೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಜಿಲ್ಲಾ ಕ್ರೀಡಾ ಕರಾಟೆ ಸಂಘದ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ಸಂಘಟಿಸಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 14 ವರ್ಷದ ಒಳಗಿನ (6 ರಿಂದ 8ನೇ) ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 17 ವರ್ಷದ ಒಳಗಿನ (9 ರಿಂದ 10ನೇ ತರಗತಿ) ವಿದ್ಯಾರ್ಥಿಗಳು ಭಾಗವಹಿಬಹುದಾಗಿದೆ ಎಂದು ಜಿಲ್ಲಾ ಕ್ರೀಡಾ ಕರಾಟೆ ಸಂಘದ ಕಾರ್ಯದರ್ಶಿ ಸೂರ್ಯಕಾಂತ ಮೋರೆ ತಿಳಿಸಿದ್ದಾರೆ.
ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಾಲೆಗಳ ಮುಖ್ಯಶಿಕ್ಷಕರಿಂದ ಅರ್ಹತಾ ಪ್ರಮಾಣ ಪತ್ರ, ಕರಾಟೆ ಸಮವಸ್ತ್ರ ಹಾಗೂ ಕಿಟ್ ತರಬೇಕು ಎಂದು ಹೇಳಿದ್ದಾರೆ.
ಪೂರ್ವಭಾವಿ ಸಭೆ: ನಗರದ ಬಾಲ ಭವನದಲ್ಲಿ ತಾಲ್ಲೂಕುಮಟ್ಟದ ಕರಾಟೆ ಸ್ಪರ್ಧೆ ಪ್ರಯುಕ್ತ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಜಿಲ್ಲಾ ಕ್ರೀಡಾ ಕರಾಟೆ ಸಂಘದ ಅಧ್ಯಕ್ಷ ರಾಜಕುಮಾರ ಟಿಳ್ಳೆಕರ್, ಉಪಾಧ್ಯಕ್ಷ ಜಗನ್ನಾಥ ಬಾಪೂರೆ, ಕಾರ್ಯದರ್ಶಿ ಸೂರ್ಯಕಾಂತ ಮೋರೆ, ಜಂಟಿ ಕಾರ್ಯದರ್ಶಿ ತುಕಾರಾಮ, ಖಜಾಂಚಿ ಶಿವರಾಮ ರಾಠೋಡ್, ಸದಸ್ಯರಾದ ಸುವಿತ್ ಮೋರೆ, ದೀಪಕ್ ರಾಠೋಡ್, ತರಬೇತುದಾರ ಸಿದ್ಧಾರ್ಥ ಮೋರೆ ಇದ್ದರು.