

ಬೀದರ್: ಬಸವಾದಿ ಶರಣರು, ಮಹಾತ್ಮರ ನುಡಿಗಳನ್ನು ಆಲಿಸುವುದರಿಂದ ನಮ್ಮ ಅಂತರಂಗದ ವಿಕಾಸವಾಗುತ್ತದೆ. ಜೀವನದ ನೆಮ್ಮದಿಗೆ ಶರಣ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಹೇಳಿದರು.
ಶ್ರಾವಣ ಮಾಸ ನಿಮಿತ್ತ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಶರಣ ಉದ್ಯಾನದಲ್ಲಿ ಆಯೋಜಿಸಿರುವ ಒಂದು ತಿಂಗಳ ಪ್ರಭುಲಿಂಗ ಲೀಲೆ ಪ್ರವಚನಕ್ಕೆ ಚಾಲನೆ ನೀಡಿದ ಅವರು, ಶರಣರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಯಾವ ಕಾಯಕ ಮಾಡಿದರೂ ಯಶಸ್ಸು ಸಿಗಲಿದೆ ಎಂದರು.
ಪ್ರತಿಷ್ಠಾನದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಾದ ಶ್ರೇಷ್ಠ ಶಿವಾನುಭವಿ ಚಾಮರಸ ರಚಿಸಿದ ಪ್ರಭುಲಿಂಗ ಲೀಲೆ ಆಧಾರವಾಗಿ ಇಟ್ಟುಕೊಂಡು ತಿಂಗಳ ಪ್ರವಚನ ನಡೆಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಷಟಸ್ಥಲ ಧ್ವಜ ಆರು ಸ್ಥಲಗಳನ್ನು ಹೊಂದಿದೆ. ಎಲ್ಲ ಕೋನಗಳು ಸಮವಾಗಿದ್ದು, ಎಲ್ಲರೂ ಸಮಾನರು ಎಂಬ ಸಂದೇಶ ಸಾರುತ್ತದೆ. ಷಟಸ್ಥಲಗಳು ಬದುಕಿನ ಸಾಧನೆ ಹಂತಗಳಾಗಿವೆ ಎಂದರು.
ಪ್ರಭುಲಿಂಗ ಲೀಲೆ ಸತ್ತವರ, ಕಾಳಗದ ಕಥೆಯಲ್ಲ. ಪುಂಡರ ಗೋಷ್ಠಿಯಲ್ಲ, ಇದು ಸತ್ಯವಂತ ಶಿವಶರಣರ ಕುರಿತು ತಿಳಿಯುವುದಾಗಿದೆ. ಅಲ್ಲಮಪ್ರಭುವಿನ ಬದುಕು ವಿವರಿಸುತ್ತಲೇ ಸಂವಾದ, ಸಂಘಟನೆ, ಸಹಬಾಳ್ವೆಯನ್ನು ಕಟ್ಟಿಕೊಡುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಖೇಳಗಿ ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರಾದಿಯಾಗಿ ಹಲವಾರು ಶರಣ-ಶರಣೆಯರು ನಡೆದಾಡಿದ ಪುಣ್ಯಭೂಮಿ ಇದಾಗಿದೆ. ಮಾನವ ಸಮಾಜದ ಉದ್ಧಾರ, ಸಮಾನತೆಗಾಗಿ ಪ್ರಯತ್ನಿಸಿ ಸಾಧನೆ ಮಾಡಿ ತೋರಿದ ನಾಡಿನಲ್ಲಿ ವಚನಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು.
ನಿವೃತ್ತ ಕಾರ್ಯಪಾಲಕ ಅಭಿಯಂತರ ಗುಂಡಪ್ಪ ಬಳತೆ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಜಯಶ್ರೀ, ಡಾ.ಸುಭಾಷ ಬಶೆಟ್ಟಿ ದಂಪತಿ ಗುರುಪೂಜೆ ನಡೆಸಿಕೊಟ್ಟರು. ವಂದೇ ಮಾತರಂ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷೆ ರತ್ನಾ ಪಾಟೀಲ್ ವಚನ ಪಠಣ ಮಾಡಿದರು.
ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ವೀರಕುಮಾರ ಮಜಗೆ ಇತರರಿದ್ದರು. ಮಲ್ಲಮ್ಮ ಪಾಟೀಲ್ ಸ್ವಾಗತಿಸಿದರು. ವೈಷ್ಣವಿ ಪಾಟೀಲ್ ನಿರೂಪಣೆ ಮಾಡಿದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ನೃತ್ಯಾಂಗನ ನಾಟ್ಯ ಕಲಾ ಕೇಂದ್ರ ತಂಡದ ವಚನಾಧಾರಿತ ನೃತ್ಯಗಳು ಜನಮನ ಸೆಳೆದವು.