ಬಿಜೆಪಿ-ಜೆಡಿಎಸ್ ವಿರುದ್ಧ ಆಕ್ರೋಶ

Protest 1
Published on

ಬೀದರ್: ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ನಗರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ಸಂವಿಧಾನ ಸಂರಕ್ಷಣಾ ಸಮಿತಿ, ಶೋಷಿತ ಸಮುದಾಯಗಳ ಒಕ್ಕೂಟ, ಗೊಂಡ ಪರ ಸಂಘಟನೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಜಂಟಿಯಾಗಿ ಸಿಎಂ ಪರ ಹೋರಾಟ ನಡೆಸಿದವು. ಬೊಮ್ಮಗೊಂಡೇಶ್ವರ ವೃತ್ತದಿಂದ ಬಸವೇಶ್ವರ ಚೌಕ್, ಮಹಾವೀರ ಸರ್ಕಲ್, ಭಗತಸಿಂಗ್ ಚೌಕ್, ಡಾ.ಅಂಬೇಡ್ಕರ್ ವೃತ್ತ, ಶಿವಾಜಿ ಸರ್ಕಲ್ ಮೂಲಕ ಜಿಲ್ಲಾಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು.
ಹಗರಣ ಎಂಬ ಪದವೇ ಬಿಜೆಪಿಯವರಿಂದ ಸೃಷ್ಟಿಯಾಗಿದ್ದು, ಕೇಸರಿ ಕಲಿಗಳಿಗೆ ಮಾತ್ರ ಅದು ಗೊತ್ತಿದೆ. ತಲೆಬುಡ ಇಲ್ಲದ ಮುಡಾ ಹಗರಣ ಸೃಷ್ಟಿಸಿದ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೆಸರೆರಚಲು ಯತ್ನಿಸುತ್ತಿರುವುದು ಮೂರ್ಖತನದ ಪರಮಾವ. ಸಿದ್ದರಾಮಯ್ಯ ಶುದ್ಧ ಹಸ್ತರು. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಬಸವಣ್ಣನವರ ತತ್ವ ಪಾಲಿಸುತ್ತ ಜನ ಕಲ್ಯಾಣವೇ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಜನಪ್ರಿಯತೆ ಸಹಿಸದ ಬಿಜೆಪಿ-ಜೆಡಿಎಸ್ ನವರು ಇಲ್ಲಸಲ್ಲದ ಆರೋಪ ಹೊರೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ನೆಮ್ಮದಿ ಬದುಕಿಗೆ ನೆರವಾಗಿದ್ದಾರೆ. ಅಂತಲೇ ಲೋಕಸಭೆ ಚುನಾವಣೆಯಲ್ಲಿ ಜನ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕ ಸ್ಥಾನಗಳಲ್ಲಿ ಗೆಲುವು ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿಯು ಕೇಂದ್ರ ಸರ್ಕಾರದ ಮೂಲಕ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಡುವಂತೆ ಮಾಡಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಹೊರಟಿದೆ. ಕೂಡಲೇ ನೋಟಿಸ್ ಹಿಂಪಡೆಯಬೇಕು. ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಅವ್ಯಹಾರಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಅಮೃತರಾವ ಚಿಮಕೋಡೆ, ಮಲ್ಲಿಕಾರ್ಜುನ ಬಿರಾದಾರ್, ರಮೇಶ ಡಾಕುಳಗಿ, ಬಸವರಾಜ ಮಾಳಗೆ, ಅನೀಲಕುಮಾರ ಬೆಲ್ದಾರ್, ಬಾಬು ಪಾಸ್ವಾನ್, ಗೀತಾ ಚಿದ್ರಿ, ಪಂಡಿತ ಚಿದ್ರಿ, ಇರ್ಷಾದ್ ಪೈಲ್ವಾನ್, ಧನರಾಜ ಹಂಗರಗಿ, ಬಸವರಾಜ ಹೇಡೆ, ಹಣಮಂತ ಮಲ್ಕಾಪುರ, ನರಸಪ್ಪ ಯಾಕತಪುರ, ಗಣಪತಿ ಕಮಠಾಣ, ಅಮರ ವಡಗಾಂವೆ, ರಾಜು ಚಿಟ್ಟಾವಾಡಿ, ಬಾಲಾಜಿ ಜಬಾಡೆ, ಸಚಿನ್ ಕಲ್ಲೂರ, ಗೋವರ್ಧನ ರಾಠೋಡ್, ವಿಠಲದಾಸ ಪ್ಯಾಗೆ ಇತರರಿದ್ದರು. ಬೇಡಿಕೆ ಸಂಬಂಧ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net