

ಚಿಟಗುಪ್ಪ: ಮಾನವನ ಅಂತರಂಗ ಮತ್ತು ಬಹಿರಂಗ ವಿಕಾಸಕ್ಕೆ ಮಹಾಮಾರ್ಗ ತೋರುವ ಗ್ರಂಥವೇ ಸಿದ್ಧಾಂತ ಶಿಖಾಮಣಿ ಎಂದು ಕಲಬುರಗಿ ಜಿಲ್ಲೆ ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಹೇಳಿದರು.
ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಶ್ರೀ ಜಗದ್ಗುರು ರೇಣುಕಾರ್ಯರು ಸಮಸ್ತ ಮಾನವ ಕಲ್ಯಾಣಕ್ಕೆ ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಶಿವ ಸಿದ್ಧಾಂತದ ಸಾರವೇ ಸಿದ್ಧಾಂತ ಶಿಖಾಮಣಿ ಗ್ರಂಥ. ಇದನ್ನು ಪ್ರತಿಯೊಬ್ಬರೂ ಓದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಂಗಲೇರಿ-ಚಿಟಗುಪ್ಪ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಾತನಾಡಿ, ಶ್ರೀ ಸಿದ್ಧಾಂತ ಶಿಖಾಮಣಿ ಮನುಷ್ಯನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಧಾರ್ಮಿಕ ವಿಜ್ಞಾನ ಗ್ರಂಥ. ಎಲ್ಲರೂ ಅಧ್ಯಯನ ಮಾಡಬೇಕು. ಶ್ರೀ ರಾಜಶೇಖರ ಶಿವಾಚಾರ್ಯ ಈ ಗ್ರಂಥವನ್ನು ಅಭಿಯಾನದ ಮೂಲಕ ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವುದನ್ನು ಶ್ಲಾಸಿದರು.
ಅಭಿಯಾನದ ರೂವಾರಿ, ಬೇಮಳಖೇಡ್-ಗೋರ್ಟಾ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಮಾತನಾಡಿ, ಈ ಅಭಿಯಾನಕ್ಕೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಪ್ರೇರಣೆ. ಒಂದು ತಿಂಗಳು ನಿತ್ಯ ಒಂದು ಕಡೆ ಪ್ರವಚನ, ಪಾರಾಯಣ, ಲಿಂಗದೀಕ್ಷೆ, ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಸಿದ್ಧಾಂತ ಶಿಖಾಮಣಿ ಪಾರಾಯಣದಿಂದ ಮನುಷ್ಯ ಮಾನಸಿಕವಾಗಿ ಸದೃಢನಾಗುತ್ತಾನೆ ಎಂದರು.
ಶ್ರಾವಣ ಮಾಸ ನಿಮಿತ್ತ ಒಂದು ತಿಂಗಳು ವಿವಿಧೆಡೆ ಅಭಿಯಾನ ಆಯೋಜಿಸಲಾಗಿದೆ. ಸಿದ್ಧಾಂತ ಶಿಖಾಮಣಿ ಗ್ರಂಥವು ವೀರಶೈವ ಧರ್ಮಗ್ರಂಥ. ಇದನ್ನು ಪ್ರತಿಯೊಬ್ಬರೂ ಓದಬೇಕು. ಈ ಗ್ರಂಥದ ಕುರಿತು ಪ್ರವಚನ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಚಂದ್ರಶೇಖರ ಚನ್ನಶೆಟ್ಟಿ, ಹಣಮಂತಪ್ಪ ಮರಕುಂದಾ, ವೀರಶೆಟ್ಟಿ ಪಟ್ನೆ, ವಿರೂಪಾಕ್ಷ ಗಾದಗಿ, ಪ್ರಭು ಸಾವಳಗಿ, ಕುಶಾಲರಾವ ಯಾಬಾ, ಸಂಜುಕುಮಾರ ಸಿದ್ಧಾಪುರ, ಶಂಕ್ರೆಪ್ಪ ಬೋರಾಳೆ, ರಾಮಶೆಟ್ಟಿ ಮೆಂಗಾ, ಶೈಲೇಂದ್ರ ಕಾವಡಿ, ದೇವಸ್ಥಾನ ಕಾರ್ಯದರ್ಶಿ ಸಂಜಯ ದೇಸಾಯಿ, ವೀರೇಶ ಪೂಜಾರಿ, ಗಂಗಾಧರ ಶಾಸ್ತ್ರಿ, ಬಸವರಾಜ ಹಾಲಹಳ್ಳಿ ಇತರರಿದ್ದರು. ರಾಜಶೇಖರ ಪೂಜಾರಿ ಸ್ವಾಗತಿಸಿದರು. ಶಿವಕುಮಾರ ಸಾಲಿ ನಿರೂಪಣೆ ಮಾಡಿದರು.