ರೂ.500 ಲಂಚಕ್ಕೆ ಒಂದು ವರ್ಷ ಜೈಲು

images
Published on

ಬೀದರ್: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಬಸವಕಲ್ಯಾಣ ತಹಸಿಲ್ ಕಚೇರಿ ದ್ವಿತೀಯ ದರ್ಜೆ ಸಹಾಯಕಿ ಜಯಶ್ರೀ ಬಸವರಾಜಗೆ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಬುಧವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಶ ವಿಜಯಕುಮಾರ ಎಂ. ಆನಂದಶೆಟ್ಟಿ ಆದೇಶಿಸಿದ್ದಾರೆ.
ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ 10 ಸಾವಿರ ಧನಸಹಾಯ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದ ಬಸವಕಲ್ಯಾಣ ತಾಲೂಕಿನ ಭೋಸಗಾ ಗ್ರಾಮದ ಲಲಿತಾಬಾಯಿ ಪುರುಷೋತ್ತಮಗೆ ಚೆಕ್ ನೀಡಲು ಜಯಶ್ರೀ ಲಂಚದ ಬೇಡಿಕೆ ಇಟ್ಟಿದ್ದರು.
ಲಲಿತಾಬಾಯಿ ಅವರಿಂದ 2013ರ ಜ.1ರಂದು 500 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅಂದಿನ ಪೊಲೀಸ್ ನಿರೀಕ್ಷಕ ಆರ್.ಎಸ್. ಜಹಾಗೀರದಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾಗಿದ್ದರಿಂದ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ. ದಂಡ ಭರಿಸಲು ತಪ್ಪಿದ್ದಲ್ಲಿ ಇನ್ನೊಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net