ವಿದೇಶದಲ್ಲಿ ಸಿಲುಕಿದ ಯುವಕರು

Japharwadi
Published on

ಬಸವಕಲ್ಯಾಣ: ಕೆಲಸ ಆರಿಸಿ ಉಜ್ಬೇಕಿಸ್ತಾನ್ ಗೆ ತೆರಳಿದ್ದ ಬೀದರ್ ಹಾಗೂ ಕಲಬುರಗಿ ಜಿಲ್ಲೆ ಯುವಕರು ಸ್ವದೇಶಕ್ಕೆ ವಾಪಸ್ ಬರಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಡಾಲರ್ ನಲ್ಲಿ ಸಂಬಳ ಪಡೆದು ಕೈತುಂಬ ಸಂಪಾದನೆ ಮಾಡಿ ಸ್ವದೇಶಕ್ಕೆ ಬರಬೇಕೆಂಬ ಕನಸು ಕಟ್ಟಿಕೊಂಡು ಹೋಗಿದ್ದ ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪ ಹಾಗೂ ಕಲಬುರಗಿಯ 14 ಯುವಕರು ಉಜ್ಬೇಕಿಸ್ತಾನ್ನಲ್ಲಿ ಊಟ, ವಸತಿ ಇಲ್ಲದೆ ಪರದಾಡಬೇಕಾಗಿದೆ.
ತಾಲೂಕಿನ ಜಾಫರ್ ವಾಡಿ ಗ್ರಾಮದ ಸುನೀಲ ಹಂಡಗೆ ಸೇರಿ 14 ಯುವಕರು ಕಲಬುರಗಿ ಮೂಲದ ಮಧ್ಯವರ್ತಿಗೆ ತಲಾ ಒಂದು ಲಕ್ಷ ರೂ. ನೀಡಿ ಕೆಲಸ ಅರಸಿ ಉಜ್ಬೇಕಿಸ್ತಾನ್ ಗೆ ಹೋಗಿದ್ದಾರೆ.
ಮಧ್ಯವರ್ತಿ ಡಾಲರ್ ಕನಸು ತೋರಿಸಿ ಯಾವುದೊಂದು ಕಂಪನಿ ಹೆಸರು ಹೇಳಿದ್ದಾನೆ. ಯುವಕರು ಅಲ್ಲಿಗೆ ಹೋಗುತ್ತಿದ್ದಂತೆ ಕಂಪನಿ ಕೆಲಸ ನೀಡದೆ, ಉಳಿದುಕೊಳ್ಳಲು ವ್ಯವಸ್ಥೆ ಸಹ ಮಾಡಿಲ್ಲ. ಬದಲು ನಿರ್ಜನ ಪ್ರದೇಶದಲ್ಲಿ ಊಟ, ವಸತಿ ಇಲ್ಲದೆ ಕೂಡಿ ಹಾಕಲಾಗಿದೆ. ಇದೇ ಭಾಗದಲ್ಲಿ ಅತಂತ್ರ ಸ್ಥಿತಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದು, ಮೃತದೇಹಗಳನ್ನು ಎಲ್ಲೋ ಬಿಸಾಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ.
ಕೈತುಂಬ ಸಂಪಾದಿಸಬೇಕೆಂಬ ಕನಸು ಕಂಡಿದ್ದ ಯುವಕರಿಗೆ ಈಗ ಸ್ವದೇಶಕ್ಕೆ ವಾಪಸಾದರೆ ಸಾಕು ಎಂಬ ಸ್ಥಿತಿಯಲ್ಲಿದ್ದಾರೆ. ಭಯ ಆಗುತ್ತಿದೆ. ದಯವಿಟ್ಟು ಆದಷ್ಟು ಬೇಗ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಜಾಫರ್ವಾಡಿಯ ಸುನೀಲ ಹಂಡಗೆ ಇತರರು ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಶಾಸಕ ಸಲಗರ ನೆರವು
ವಿದೇಶದಲ್ಲಿ ಸಿಲುಕಿರುವ ಯುವಕರ ಜತೆ ಮಾತನಾಡಿದ್ದು, ಊಟ, ವಸತಿಗಾಗಿ 50 ಸಾವಿರ ರೂ. ಅವರ ಅಕೌಂಟ್ ಗೆ ಹಾಕಿರುವೆ. ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮಾಹಿತಿ ನೀಡಿರುವೆ. ಎಲ್ಲ ಯುವಕರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನ ಮಾಡುತ್ತಿರುವೆ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net