ಪಟ್ಟದ್ದೇವರ ಸೇವೆ ಅವಿಸ್ಮರಣೀಯ

Oplus_131072
Oplus_131072
Published on

ಭಾಲ್ಕಿ: ಗಡಿ ಭಾಗದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವತತ್ವ ಪ್ರಸಾರ-ಪ್ರಚಾರ ಜತೆ ಶೈಕ್ಷಣಿಕ ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವುದು ಅವಿಸ್ಮರಣೀಯ ಎಂದು ಮಹಾರಾಷ್ಟ್ರದ ಯುವ ಮತ್ತು ಕ್ರೀಡಾ ಕಲ್ಯಾಣ ಸಚಿವ ಸಂಜಯ ಬನಸೋಡೆ ಬಣ್ಣಿಸಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೂಜ್ಯರು ವಿವಿಧ ಸೇವೆ ಜತೆಗೆ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಸಂಸ್ಕಾರದೊಂದಿಗೆ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಮಹಾರಾಷ್ಟ್ರದ ಸಾವಿರಾರು ವಿದ್ಯಾರ್ಥಿಗಳು ಗುರುಕುಲದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪಟ್ಟದ್ದೇವರು ಬಸವಣ್ಣನವರ ಅಪ್ಪಟ ಅನುಯಾಯಿ. ಬಸವ ತತ್ವವನ್ನು ಕರ್ನಾಟಕಲ್ಲದೆ ಮಹಾರಾಷ್ಟ್ರದಲ್ಲೂ ಮರಾಠಿಯಲ್ಲಿ ಸಾಹಿತ್ಯ ರಚಿಸಿ ವ್ಯಾಪಕ ಪ್ರಚಾರ-ಪ್ರಸಾರ ಮಾಡಿ ಮರಾಠಿ ಭಾಷಿಕರಲ್ಲಿ ಬಸವ ತತ್ವದ ಮಹತ್ವ ಸಾರಲು ಪ್ರಯತ್ನಿಸುತ್ತಿದ್ದಾರೆ. ಪಟ್ಟದ್ದೇವರೊಂದಿಗೆ ಹಿಂದಿನಿಂದಲೂ ಆತ್ಮೀಯ ಒಡನಾಟವಿದ್ದು, ಮಹಾರಾಷ್ಟ್ರದ ವಿವಿಧೆಡೆ ಸಭೆ-ಸಮಾರಂಭಗಳಲ್ಲಿ ಪೂಜ್ಯರ ಜತೆ ವೇದಿಕೆ ಹಂಚಿಕೊಂಡಿದ್ದೇನೆ. ಇಲ್ಲಿಗೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದಿರುವುದು ನನ್ನ ಸುದೈವ ಎಂದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಹಾರಾಷ್ಟ್ರದಲ್ಲಿ ಬಸವತತ್ವ ಪ್ರಚಾರ ಜತೆಗೆ ಮರಾಠಿ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಮಹಾರಾಷ್ಟ್ರ ಜನ ಪೂಜ್ಯರ ಸೇವೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಬಸವ ತತ್ವದಲ್ಲಿ ಪರಿಹಾರ ಇದೆ. ಹೀಗಾಗಿ ಬಸವ ತತ್ವವನ್ನು ಜಗದಗಲ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಉದಗೀರದ ಮುಖಂಡ ರಮೇಶ ಅಂಬರಖಾನೆ, ಮಲ್ಲಿಕಾರ್ಜುನ ಸ್ವಾಮಿ, ಚಂದ್ರಕಾಂತ ಪಾಟೀಲ್, ಡಾ.ಪಟವಾರಿ, ಶಿವಾಜಿರಾವ ಕಾಳೆ, ನಾನಾಜಿ ಪವಾರ್, ಸಂಸ್ಥೆ ಆಡಳಿತಾಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇತರರಿದ್ದರು. ಸಾಹಿತಿ ರಾಜು ಜುಬರೆ ನಿರೂಪಣೆ ಮಾಡಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net