

ಹುಮನಾಬಾದ್: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿಗೆ ವಸತಿ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಜಿಲ್ಲಾ ಪೊಲೀಸ್ ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹೊಸದಾಗಿ ನಿರ್ಮಿಸುತ್ತಿರುವ 36 ಸಿಬ್ಬಂದಿ ವಸತಿಗೃಹ ಕಾಮಗಾರಿಗೆ ಪಟ್ಟಣದ ಠಾಣೆ ಮೈದಾನದಲ್ಲಿ ಭೂಮಿಪೂಜೆ ನೆರವೇರಿಸಿದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸುರ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡುವ ಉದ್ದೇಶದಿಂದ ವಸತಿಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಅನುಗುಣವಾಗಿ ವಸತಿಗೃಹಗಳ ಅಗತ್ಯ ಇರುವುದನ್ನು ಮನಗಂಡು ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಮೂರು ಬ್ಲಾಕ್ಗಳಲ್ಲಿ ತಲಾ 12 ವಸತಿಗೃಹಗಳು ಡಬಲ್ ಬೆಡ್ ಇತರ ಮೂಲಸೌಲಭ್ಯ ಹೊಂದಿರಲಿವೆ. ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ವಸತಿಗೃಹಗಳನ್ನು ಮಂಜೂರಿ ಮಾಡಿದ ರಾಜ್ಯ ಸರ್ಕಾರ, ಗೃಹ ಸಚಿವರಿಗೆ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಈಗಾಗಲೇ ನಿರ್ಮಾಣಗೊಂಡಿರುವ ವಸತಿಗೃಹಗಳ ಉದ್ಘಾಟನೆ ಶೀಘ್ರದಲ್ಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಸ್ತದಿಂದ ನೆರವೇರಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಹೆಚ್ಚಿನ ವಸತಿಗೃಹ ಮಂಜೂರು ಮಾಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಎಸ್ಪಿ ಸೇರಿ ಅಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ಪೊಲೀಸ್ ಇಲಾಖೆ ಸದಾ ಜನರ ಸೇವೆಯಲ್ಲಿ ಇರಲಿದೆ. ಹುಮನಾಬಾದ್ ನಲ್ಲಿ ಕೈಗೊಂಡಿರುವ ಪೊಲೀಸ್ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿ ಗುಣಮಟ್ಟದ ಬಗ್ಗೆ ನಿರಂತರ ನಿಗಾ ಇರಿಸಲಾಗುವುದು. ಜಿಲ್ಲಾ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಸದಾ ಇರಬೇಕು ಎಂದರು.
ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ, ಪುರಸಭೆ ಸದಸ್ಯರಾದ ಸುನೀಲ ಪಾಟೀಲ್, ರಮೇಶ ಕಲ್ಲೂರ, ಧನಲಕ್ಷ್ಮೀ, ಗುತ್ತಿಗೆದಾರ ನಾರಾಯಣ ಸಿಂಘಡೆ, ಪ್ರಮುಖರಾದ ಅನೀಲ ಪಸರ್ಗೆ, ಸಂತೋಷ ಪಾಟೀಲ್, ಪ್ರಭಾಕರ ನಾಗರಾಳೆ, ರವಿ ಹೊಸಳ್ಳಿ, ಗೋಪಾಲಕೃಷ್ಣ ಮೋಹಳೆ, ಗಿರೀಶ್ ಪಾಟೀಲ್, ಮಾಣಿಕರಡ್ಡಿ, ಗಿರೀಶ್ ತುಂಬಾ, ಸಂತೋಷ ನಾವದಗಿ, ಸುನೀಲ ಪತ್ರಿ ಇತರರಿದ್ದರು.