ಸಹಕಾರ ತತ್ವಕ್ಕೆ ಸರ್ಕಾರ ತಿಲಾಂಜಲಿ

pressmeet
Published on

ಬೀದರ್: ವಿಧಾನಸಭೆ ಅಧಿವೇಶನದಲ್ಲಿ ಸಹಕಾರ ಸಂಘಗಳ ಕಾಯ್ದೆ-1959 ಹಾಗೂ ಸೌಹಾರ್ದ ಸಹಕಾರಿ ಅಧಿನಿಯಮ-1997ಕ್ಕೆ ತಿದ್ದುಪಡಿ ತರುವ ಮೂಲಕ ಸಹಕಾರ ತತ್ವಗಳಿಗೆ ರಾಜ್ಯ ಸರ್ಕಾರ ತಿಲಾಂಜಲಿ ಹೇಳಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಆರೋಪಿಸಿದರು.
ಸಹಕಾರ ತತ್ವಗಳನ್ನು ವಿಶ್ವದ ಎಲ್ಲ ದೇಶಗಳು ಒಪ್ಪಿಕೊಂಡಿವೆ. ಆದರೆ ರಾಜ್ಯ ಸರ್ಕಾರ ಅದರ ವಿರುದ್ಧವಾಗಿ ಕಾಯ್ದೆ ತಿದ್ದುಪಡಿ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಪ್ರಸ್ತುತ ಸರ್ಕಾರ ಸಹಕಾರ ಸಂಘಗಳ ಅಧಿನಿಯಮ 2 ತಿದ್ದುಪಡಿ ಮಾಡಿ ಸರ್ಕಾರದ ನೆರವು ಪಡೆದ ಸಂಘಗಳ ಆಡಳಿತ ಮಂಡಳಿಗೆ ಮೂವರನ್ನು ನಾಮನಿರ್ದೇಶನ ಮಾಡಬಹುದು ಎಂದಿರುವುದು ಚಳವಳಿಗೆ ಮಾರಕ. ಮೂರು ವರ್ಷಕ್ಕೊಮ್ಮೆ ಪ್ರತಿಯೊಂದು ಸಹಕಾರ ಸಂಘ ತನ್ನ ಲೆಕ್ಕಪತ್ರವನ್ನು ಲೆಕ್ಕ ಪರಿಶೋಧನಾ ಇಲಾಖೆಯಿಂದ ಮಾಡಿಸತಕ್ಕದ್ದು ಎಂದು ತಿದ್ದುಪಡಿ ಮಾಡಿದ್ದರಿಂದ ಆರ್ಥಿಕ ಹೊರೆಯಾಗಲಿದೆ. ಅನಗತ್ಯವಾಗಿ ಆಡಳಿತ ಮಂಡಳಿ ಸಂಖ್ಯೆ ಹೆಚ್ಚಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಹಕಾರ ಚಳವಳಿ ಹತ್ತಿಕ್ಕುವ ಮತ್ತು ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲು ಹೊರಟಿದೆ. ಈ ರೀತಿಯ ತಿದ್ದುಪಡಿ ಮಾಡಿದ ಅನೇಕ ಸಂದರ್ಭದಲ್ಲಿ ನ್ಯಾಯಾಲಯಗಳು ಚಾಟಿ ಬೀಸಿವೆ ಎಂದರು.
ಪ್ರಮುಖರಾದ ಸಂಜಯ ಖ್ಯಾಸಾ, ಸೂರ್ಯಕಾಂತ ಮಠಪತಿ, ಶ್ರೀಕಾಂತ ಸ್ವಾಮಿ ಸೋಲಪುರ, ಸಂಜುಕುಮಾರ ಸಜ್ಜನ್, ಕ್ರಾಂತಿಕುಮಾರ ಕುಲಾಲ್, ನಾಗಶೆಟ್ಟಿ ಪಾಟೀಲ್, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net