

ಬೀದರ್: ಅತಿವೃಷ್ಟಿಯಿಂದ ಮನೆಗಳು ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ರಾಜ್ಯ ಸಕರ್ಾರ ತುರ್ತು ಪರಿಹಾರ ಒದಗಿಸಿ ನೆರವಿಗೆ ಬರಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.
ದಕ್ಷಿಣ ಕ್ಷೇತ್ರದ ಕಮಠಾಣ, ಖಾಶೆಂಪುರ(ಪಿ), ಕಾಡವಾದ, ಚಟ್ನಳ್ಳಿ, ಬಗದಲ್, ಸಿಂದೋಲ್, ರಾಜಗೀರಾ ಇತರ ಗ್ರಾಮಗಳಿಗೆ ಮಂಗಳವಾರ ಹಾಗೂ ಬುಧವಾರ ಭೇಟಿ ನೀಡಿ ಅತಿವೃಷ್ಟಿಯಿಂದಾದ ಮನೆ ಹಾನಿ ಪರಿಶೀಲಿಸಿದ ಅವರು, ವಿಪತ್ತಿನ ಕಾಲದಲ್ಲಿ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕಬಾರದು. ಜಿಲ್ಲಾಡಳಿತ ಬೇಗ ಹಾನಿ ಸಮೀಕ್ಷೆ ನಡೆಸಿ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಎರಡು ವಾರದಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಪೂರಕವಾಗಿದೆ. ಆದರೆ ಸಾಕಷ್ಟು ಮನೆಗಳಿಗೆ ಹಾನಿ ತಂದಿಟ್ಟಿದೆ. ದಕ್ಷಿಣ ಕ್ಷೇತ್ರದ 250ಕ್ಕೂ ಹೆಚ್ಚು ಮನೆ ಹಾನಿಗೀಡಾಗಿವೆ. ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಮನೆ ಹಾನಿಯಾದ ಬಗ್ಗೆ ಅಂದಾಜಿಸಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಪೂರ್ಣ ಮತ್ತು ಭಾಗಶಃ ಮನೆ ಕುಸಿದಿದ್ದರಿಂದ ಬಡವರು, ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ವಿಳಂಬ ಮಾಡದೆ ತುರ್ತು ಪರಿಹಾರ ನೀಡಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪೂರ್ಣ ಮನೆ ಹಾನಿಯಾದವರಿಗೆ 5 ಲಕ್ಷ ರೂ., ಭಾಗಶಃ ಹಾನಿಗೀಡಾಗಿದ್ದರೆ 2.50 ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗಿನ ಸರ್ಕಾರ ಪರಿಹಾರ ಮೊತ್ತ ದಿಢೀರ್ ಕಮ್ಮಿ ಮಾಡಿದೆ. ಪೂರ್ಣ ಮನೆ ಬಿದ್ದರೂ ಗರಿಷ್ಠ 1.25 ಲಕ್ಷ ರೂ. ಘೋಷಿಸಿದ್ದು ಅನ್ಯಾಯ ಎಂದು ಹೇಳಿದರು.
ಪ್ರಮುಖರಾದ ಗುರುನಾಥ ಎಂ.ರಾಜಗೀರಾ ಬಗದಲ್, ಚಂದ್ರಯ್ಯಾ ಸ್ವಾಮಿ, ಸಂಜುಕುಮಾರ ಕೋಳಿ, ಸುರೇಶ ಮಾಶೆಟ್ಟಿ, ಜಗನ್ನಾಥ ಸಿರಕಟನಳ್ಳಿ, ಮಾಣಿಕಪ್ಪ ಖಾಶೆಂಪುರ, ಶಿವಕುಮಾರ ಸ್ವಾಮಿ, ಓಂಕಾರ ಮಜಗೆ, ಕುಶಾಲರಾವ ಯಾಬಾ, ನಾಗಭೂಷಣ ಕಮಠಾಣೆ, ಉಮೇಶ ಯಾಬಾ, ಬಸವರಾಜ ಕ್ಯಾಸಾ, ರವಿ ಬಾಲೆಬಾಯಿ, ಮನ್ಮಥ ಕಾಡವಾದ, ಘಾಳೆಪ್ಪ ಚಟ್ನಳ್ಳಿ, ಧನರಾಜ ಯಾದವ್, ಬಸವರಾಜ ಆಣದೂರ, ಜನಾರ್ಧನರಡ್ಡಿ, ಚಂದ್ರಶೇಖರ ಶೇಖಾಪುರ, ಗುಂಡಪ್ಪ ಮೇತ್ರೆ ಇತರರಿದ್ದರು.