

ಬೀದರ್: ಶಿವಲಿಂಗೇಶ್ವರ ಶಿವಯೋಗಿಗಳ 100ನೇ ಪುಣ್ಯತಿಥಿ ಅಂಗವಾಗಿ ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಬುಧವಾರ ಆನೆ ಮೇಲೆ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಪುಷ್ಪಾಲಂಕೃತ ತೊಟ್ಟಿಲಲ್ಲಿ ಶ್ರೀಗಳ ಬೃಹತ್ ಭಾವಚಿತ್ರ ಹಾಗೂ ‘ಶಿವಲಿಂಗೇಶ್ವರ ಕರುಣಾಮೃತ ವಿಲಾಸಂ’ ಗ್ರಂಥ ಇಡಲಾಗಿತ್ತು. ಮೆರವಣಿಗೆ ಉದ್ದಕ್ಕೂ ಶ್ರೀಗಳ ಜೈಕಾರ ಮೊಳಗಿತ್ತು.
ಡೊಳ್ಳು ಕುಣಿತ, ಬ್ಯಾಂಡ್ ಬಾಜಾ, ಕೋಲಾಟ ಸೇರಿ ವಿವಿಧ ಕಲಾ ತಂಡಗಳ ಪ್ರದರ್ಶನ, ಯುವಕರ ನರ್ತನ ಮೆರವಣಿಗೆಗೆ ವಿಶೇಷ ಕಳೆ ನೀಡಿದವು.
ಮೆರವಣಿಗೆಗೆ ಸ್ವಾಗತ ಕೋರಲು ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಶಿವಲಿಂಗೇಶ್ವರ ಮಠದಿಂದ ಆರಂಭಗೊಂಡ ಮೆರವಣಿಗೆ ಸಾಯಿಬಾಬಾ ಮಂದಿರ, ಬಸ್ ನಿಲ್ದಾಣ, ಮಹಾದೇವ ಮಂದಿರ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನಃ ಮಠಕ್ಕೆ ಆಗಮಿಸಿ ಸಮಾರೋಪಗೊಂಡಿತು.
ಮುಖಂಡ ರಾಜಕುಮಾರ ಹಲಬುರ್ಗೆ ಹಾಗೂ ಕಾರ್ಯಕ್ರಮದ ಆಯೋಜಕರೂ ಆದ ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಸ್ವಾಮಿ ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು. ಪ್ರಮುಖರಾದ ಸುನೀಲ್ ಹಲಬುರ್ಗೆ, ರಾಜಕುಮಾರ ಹಲಬುರ್ಗೆ, ವಿಜಯಕುಮಾರ ಹೊಸಖಂಡೆ, ಸಚಿನ್ ಕತ್ತೆ, ಗಜಾನಂದ ವಟಗೆ, ಪಪ್ಪು ಬಿಚಕುಂದೆ, ಉದಯ ಸೋಲಾಪುರೆ, ನಾಗಯ್ಯ ಸ್ವಾಮಿ, ಸೋಮನಾಥ ಖಡ್ಕೆ, ಮಹೇಶ ಕಾಪಸೆ, ಸಂಜುಕುಮಾರ ಹರಡಗೆ, ವಿಜಯಕುಮಾರ ಹಳಕಾಯಿ, ಸಂಗ್ರಾಮ ಹೊಸಖಂಡೆ, ಸಂತೋಷ ಬಸನಾಳೆ, ಬಾಲಾಜಿ ಹಲಬುರ್ಗೆ, ತುಕಾರಾಮ ಜೈರಾಮ್, ಮಾಧವರಾವ್ ಹೊಡಗೆ, ಕಲ್ಯಾಣರಾವ್ ನೌಬಾದೆ, ಯುವರಾಜ ಬಿಚಕುಂದೆ, ವಿಶ್ವಜೀತ್ ಬಿಚಕುಂದೆ, ರಾಜಕುಮಾರ ಬಿಚಕುಂದೆ, ಸಂಗಮೇಶ ಮೈಲಾರೆ, ಚಂದು ಕತ್ತೆ, ಸಾಯಿನಾಥ ಘೋಡೆ, ಹಣಮಂತ ಮುಸ್ತಾಪುರೆ, ಪರಮೇಶ ಬಾವಗೆ, ಶಿವಕಾಂತ ಖಂಡೆ, ಲೋಕೇಶ ಹೊಸಖಂಡೆ, ಅನಿಲ್ ಹೊಡಗೆ, ರಾಜಕುಮಾರ ಮಠಪತಿ, ಗಣಪತಿ ಖಡ್ಕೆ, ಸಂತೋಷ್ ಘೋದಿಹಿಪ್ಪರ್ಗೆ, ಸೋಮನಾಥ ಖಡ್ಕೆ ಮೊದಲಾದವರು ಪಾಲ್ಗೊಂಡಿದ್ದರು. ಗ್ರಾಮ, ಜಿಲ್ಲೆ ಹಾಗೂ ನೆರೆ ರಾಜ್ಯಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಭಾಲ್ಕಿ ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ, ಕಮಲನಗರ ಸಿಪಿಐ ಅಂಬ್ರೇಶ್ ಶಿವಬಲ್ಲ, ಪಿಎಸ್‍ಐ ಚಂದ್ರಕಾಂತ ನಿರ್ಣೆಕರ್, ಠಾಣಾಕುಶನೂರ ಪಿಎಸ್‍ಐ ಚಂದ್ರಶೇಖರ ಸ್ವಾಮಿ, ಚಿಂತಾಕಿ ಪಿಎಸ್‍ಐ ಸಿದ್ಧಲಿಂಗ, ಎಸ್.ಎಲ್. ಪಾಟೀಲ ಬಿರಾದಾರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ದುಶ್ಚಟ ಭಿಕ್ಷೆ ಬೇಡಿದ ವೈಜಿನಾಥ ಶ್ರೀ
ಶಿವಲಿಂಗೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ವೈಜಿನಾಥ ಶಿವಲಿಂಗ ಶಿವಾಚಾರ್ಯರು ಕೈಯಲ್ಲಿ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ದುಶ್ಚಟಗಳ ಭಿಕ್ಷೆ ಬೇಡಿದರು. ಅನೇಕರು ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿದರು. ಅಂಥವರಿಗೆ ಶ್ರೀಗಳು ರುದ್ರಾಕ್ಷಿ ಧಾರಣೆ ಮಾಡಿಸಿದರು.
ನಿರಂತರ ಧಾರ್ಮಿಕ ಕಾರ್ಯಕ್ರಮ
ಶಿವಲಿಂಗೇಶ್ವರ ಶಿವಯೋಗಿಗಳ 100ನೇ ಪುಣ್ಯತಿಥಿ ಅಂಗವಾಗಿ ಗ್ರಾಮದಲ್ಲಿ ಜುಲೈ 11 ರಿಂದ ಬುಧವಾರದ ವರೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ನಿತ್ಯ ಬೆಳಿಗ್ಗೆ ಮಹಿಳೆಯರಿಂದ ರುದ್ರಾಭಿಷೇಕ, ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಜರಟಗಿ ಮಠದ ಮಡಿವಾಳಯ್ಯ ಶಾಸ್ತ್ರಿ ಅವರಿಂದ
ಸಂಜೆ ಶಿವಲಿಂಗೇಶ್ವರ ಕರುಣಾಮೃತ ವಿಲಾಸಂ ಪ್ರವಚನ, ಪ್ರಸಾದ ವಿತರಣೆ ನಡೆದವು. ಆಗಸ್ಟ್ 1 ರಂದು ಕಾರ್ಯಕ್ರಮಗಳು ಸಮಾರೋಪಗೊಳ್ಳಲಿದ್ದು, ಮಹಾ ಪ್ರಸಾದ ವಿತರಣೆ ನಡೆಯಲಿದೆ.