ಜಾನಪದ ಸಂರಕ್ಷಣೆ ಸರ್ವರ ಕರ್ತವ್ಯ

30BK3
Published on

ಬಸವಕಲ್ಯಾಣ: ಜಾನಪದ ಸಾಹಿತ್ಯದಲ್ಲಿ ಎಲ್ಲವೂ ಅಡಗಿದೆ. ಪ್ರೀತಿ, ದಯೆ, ಪರಸ್ಪರ ಸಹಕಾರ ಸೇರಿ ಪ್ರತಿಯೊಂದು ಅಂಶ ಇದೆ. ಜಾನಪದ ಸಂರಕ್ಷಣೆ ಸರ್ವರ ಕರ್ತವ್ಯವಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಾಲಾ-ಕಾಲೇಜಿಗೊಂದು ಜಾನಪದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಾನಪದವು ಜನರ ಬದುಕಿನ ಕನ್ನಡಿಯಾಗಿದೆ. ಜೀವನದ ಎಲ್ಲ ವಲಯವು ಜಾನಪದದಿಂದ ಆವೃತ್ತವಾಗಿದೆ. ಅದರ ಉಳಿವು ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
ಪಾರಂಪರಿಕ ಕಲೆ, ಸಾಹಿತ್ಯ, ವೈದ್ಯ ವಿಜ್ಞಾನ ಆಧುನಿಕ ಕಾಲದಲ್ಲಿ ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ ಎಂದರು.
ಜಾನಪದ ಸಂಸ್ಕೃತಿಯಲ್ಲಿ ಜೀವನದ ಹಲವು ಅನುಭವ ಅಡಕವಾಗಿವೆ. ಅದು ಬದುಕಿನ ಎಲ್ಲ ಮುಖಗಳನ್ನು ಒಳಗೊಂಡಿದೆ. ಇದರ ಕುರಿತು ವಿದ್ಯಾರ್ಥಿಗಳು, ಯುವ ಸಂಶೋಧಕರು ಆಸಕ್ತಿಯಿಂದ ಅಧ್ಯಯನ ಮಾಡಬೇಕಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಉಪನ್ಯಾಸ ನೀಡಿ, ಮನುಷ್ಯನ ಬದುಕಿನಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಿದ ಜಾನಪದವು ಪ್ರೀತಿ, ಪ್ರೇಮ, ಸೋದರತ್ವ, ಸೌಹಾರ್ದತೆ, ಸಾಮರಸ್ಯಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದರು.
ಮನಸ್ಸು ಒಂದಾಗಿಸುವ, ಸಾಮಾಜಿಕ ಸಂಬಂಧ ಒಂದುಗೂಡಿಸುವ, ಮಾನವೀಯ ಮೌಲ್ಯ ಎತ್ತಿ ಹಿಡಿಯುವ ತತ್ವ ಜಾನಪದದ ಜೀವಾಳವಾಗಿದೆ. ಜಾನಪದ ಹಾಡು, ಒಗಟು, ಗಾದೆ, ರಂಗಭೂಮಿ ಹೀಗೆ ನಾನಾ ಕಲೆಗಳ ಬಗೆಗೆ ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಜಾನಪದ ಸಂಸ್ಕೃತಿಯನ್ನು ಅಳಿಯಲು ಅವಕಾಶ ನೀಡಬಾರದು. ಜಾನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ವ ಅಡಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಮಾತೃ ಸಂಸ್ಕೃತಿ ಅಳವಡಿಸಿಕೊಂಡು ಪೋಷಣೆ ಮಾಡಬೇಕು ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಔರಾದ್ನ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಅಶೋಕ ಕೋರೆ, ಡಾ.ಶಿವಾಜಿ ಮೇತ್ರೆ, ದೇವೇಂದ್ರ ಬರಗಾಲೆ, ಲಕ್ಷ್ಮೀಬಾಯಿ ಪಾಟೀಲ್, ಭೀಮಾಶಂಕರ ಬಿರಾದಾರ್, ಚನ್ನಬಸವ ಗೌರ, ಗಂಗಾಧರ ಸಾಲಿಮಠ ಮೊದಲಾದವರಿದ್ದರು.
ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಬಸವರಾಜ ಗುಂಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net