ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ

filter: 0; jpegRotation: 180; fileterIntensity: 0.000000; filterMask: 0;
filter: 0; jpegRotation: 180; fileterIntensity: 0.000000; filterMask: 0;
Published on

ಬೀದರ್: ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅವುಗಳನ್ನು ತಡೆದು ಮಕ್ಕಳ ಬಾಳನ್ನು ಬೆಳಕು ಮಾಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಬಾಲ್ಯ ವಿವಾಹಗಳನ್ನು ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬಾಲ್ಯ ವಿವಾಹ ಮಾಡುವ ಪಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಬೇಕೆಂಬ ನಿಯಮವಿದ್ದು, ಅದನ್ನು ಮಾಡಿದಾಗ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ. ಜಿಲ್ಲೆಯ ಕಲ್ಯಾಣ ಮಂಟಪ ಹಾಗೂ ಸಾಮೂಹಿಕ ವಿವಾಹ ನಡೆಯುವ ಸ್ಥಳಗಳ ಮೇಲೆ ಅಧಿಕಾರಿಗಳು ಗಮನಹರಿಸಬೇಕು. ಕಾಟಾಚಾರಕ್ಕೆ ಅಕಾರಿಗಳು ಕೆಲಸ ಮಾಡದೆ ಜವಾಬ್ದಾರಿಯಿಂದ ಮಾಡಿದ್ದಾಗ ಮಾತ್ರ ಬಾಲ್ಯ ವಿವಾಹದಂಥ ಇತರ ಹಲವಾರು ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.
ಮಕ್ಕಳ ಪಾಲನೆ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದಿಂದ ನೋಂದಣಿ ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿ ಆಗಾಗ್ಗೆ ಸಭೆ ನಡೆಸಿ ಮಾಹಿತಿ ಪಡೆಯಬೇಕು ಎಂದು ಎಲ್ಲ ತಹಸಿಲ್ದಾರ್ ಅವರಿಗೆ ಸೂಚಿಸಿದರು.
ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ತಪ್ಪು. ಹೋಟೆಲ್, ಗ್ಯಾರೇಜ್ ಹಾಗೂ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕ ಮಕ್ಕಳು ಕಂಡುಬಂದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು ಎಂದು ಹೇಳಿದರು.
ಸಾಂತ್ವನ ಕೇಂದ್ರಗಳಲ್ಲಿರುವ ಮಕ್ಕಳನ್ನು ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ಮಾಡಿಸಬೇಕು ಹಾಗೂ ಕ್ರೀಡಾ ಇಲಾಖೆಯಿಂದ ಆ ಮಕ್ಕಳಿಗೆ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಬೇಕು. ಬ್ರಿಮ್ ನಲ್ಲಿ ಜನರಿಗೆ ಶುದ್ಧ ನೀರು ಕುಡಿಯಲು ಆರ್. ಓ ಪ್ಲ್ಯಾಂಟ್ ಇಲ್ಲ ಎಂಬ ದೂರು ಬಂದಿವೆ. ಈ ಬಗ್ಗೆ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತು ಹಲವಾರು ಜನ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕು. ಈ ಕಾರ್ಯಕ್ರಮ ಬೀದರ್ ನಗರದಲ್ಲಿ ಮಾತ್ರ ಮಾಡಿದರೆ ಸಾಲದು. ಜಿಲ್ಲೆಯ ಇತರ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಆಯೋಜಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ನಗರಸಭೆ ಆಯುಕ್ತ ಶಿವರಾಜ ರಾಠೋಡ್, ಡಿಡಿಪಿಯು ಚಂದ್ರಕಾಂತ ಶಾಬಾದಕರ್, ಡಿಡಿಪಿಐ ಸಲೀಂ ಪಾಶಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಹದಿಹರೆಯದವರ ಗರ್ಭ
49 ಪ್ರಕರಣ ದಾಖಲು
ಜಿಲ್ಲಾದ್ಯಂತ ಪ್ರಸಕ್ತ ವರ್ಷ ದಾಖಲಾದ 49 ಹದಿಹರೆಯದವರ ಗರ್ಭಧಾರಣೆ ಪ್ರಕರಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವ ಜತೆಗೆ ಇಂಥ ಪ್ರಕರಣ ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಪ್ರೌಢ ಶಾಲೆ ಮತ್ತು ಪಿಯುಸಿಯಲ್ಲಿ ಎಷ್ಟು ಮಕ್ಕಳು ವ್ಯಾಸಂಗ ಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಬೇಕು ಹಾಗೂ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಹಾಯವಾಣಿ ಬೋಡ್೯ಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net