

ಬೀದರ್: ಹಳೆಯ ಪಿಂಚಣಿ ಯೋಜನೆಯನ್ನು ಸರ್ಕಾರ ಶೀಘ್ರದಲ್ಲಿ ಜಾರಿಗೊಳಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ಮಾಡಲು ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನಿರ್ಧರಿಸಿತು.
ಸಂಘದ ರಾಜ್ಯಾಧ್ಯಕ್ಷ ಜಿ.ಹನಮಂತಪ್ಪ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಯರನಳ್ಳಿ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿದ್ದ ಸಂಘದ ಜಿಲ್ಲಾ, ತಾಲೂಕು ಘಟಕದ ಪದಾಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿ, ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಹಳೆಯ ಪಿಂಚಣಿ ಯೋಜನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನಪ್ರತಿನಿಧಿಗಳಿಗೆ ಮನವಿಪತ್ರ ಸಲ್ಲಿಕೆ, ಹೋರಾಟಗಳು ನಡೆದಿವೆ. ಈಗಾಗಲೇ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಆದೇಶ ರಾಜ್ಯ ಸರ್ಕಾರ ಹೊರಡಿಸಿದೆ. ಶೀಘ್ರ ಅದನ್ನು ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರ್ಕಾರವು ಭರಿಸಲು ಕ್ರಮವಹಿಸಬೇಕು. ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಧೇಯಕಕ್ಕೆ ತಿದ್ದುಪಡಿ ತರಬೇಕು ಅಥವಾ ರದ್ದುಪಡಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅನುದಾನಿತ ನೌಕರರಿಗೂ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು ವರ್ಷ ಕಳೆದರೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹಳೆಯ ಪಿಂಚಣಿ ಯೋಜನೆ ಜಾರಿಗೊಂಡಿಲ್ಲ. ಈ ಯೋಜನೆ ಶೀಘ್ರ ಜಾರಿಗೊಳಿಸದಿದ್ದರೆ ಮತ್ತೆ ಹೋರಾಟದ ಹಾದಿ ಹಿಡಿಯಲಾಗುವುದು. ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ನ್ಯಾಯಯುತ ಎಲ್ಲ ಬೇಡಿಕೆ ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಗೌರಾಧ್ಯಕ್ಷ ನಾಗರಾಜ ಬುಕ್ಕಾಬುಂದಿ, ಪ್ರಮುಖರಾದ ಮಲ್ಲಿಕಾರ್ಜುನ ಡೊನ್ನೂರು, ಅಮೃತರಾವ ಚಿಮಕೋಡೆ, ಜೈರಾಜ ಖಂಡ್ರೆ, ಅಂತಪ್ಪ ಬಿರಾದಾರ್, ಡಾ.ಹನೀಫ್ ಶಿವಾಜಿ, ಪ್ರಶಾಂತರಾಗ, ಪರಮೇಶ್ವರ ಬಿರಾದಾರ್, ಪ್ರತಿಭಾ ಚಾಮಾ, ಉಮೇಶ ಪಾಟೀಲ್, ಲಕ್ಷ್ಮಣ ಪೂಜಾರಿ, ಬಾಲಾಜಿ, ಶಿವಕುಮಾರ ವಾಲ್ದೊಡ್ಡಿ, ಎ.ಡಿ. ಕುಲಕರ್ಣಿ, ಮಾರುತಿ ಬಿರಾದಾರ್ ಇತರರಿದ್ದರು.