ಇನ್ಫಿನಿಟಿ ಶಾಲೆಯಲ್ಲಿ ವನ ಮಹೋತ್ಸವ

Van Mahotsava
Published on

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ದಿ ಇನ್ಫಿನಿಟಿ ಶಾಲೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆ ಆವರಣದಲ್ಲಿ ಸೋಮವಾರ ವನ ಮಹೋತ್ಸವ ನಡೆಯಿತು.
ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಮಾಜಿಕ ಅರಣ್ಯ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ ಎ.ಬಿ. ಪಾಟೀಲ ಮಾತನಾಡಿ, ಸಾರ್ವಜನಿಕರಲ್ಲಿ ಹಸಿರು ಪ್ರೀತಿ ಬೆಳೆಸುವ ಹೆಚ್ಚು ಅವಶ್ಯಕತೆ ಇದೆ ಎಂದು ತಿಳಿಸಿದರು.
ಒಂದು ಸಸಿಗೆ ನೀರು, ಗೊಬ್ಬರ ಕೊಟ್ಟು ಮೂರು ತಿಂಗಳು ಬೆಳೆಸಿದರೆ, ನೂರು ವರ್ಷ ಆಮ್ಲಜನಕ ಕೊಡುತ್ತದೆ ಎಂದು ಹೇಳಿದರು.
ಡಾ. ರಘು ಕೃಷ್ಣಮೂರ್ತಿ ಮಾತನಾಡಿ, ಶಾಲೆಯಲ್ಲಿ 50ಕ್ಕೂ ಹೆಚ್ಚು ಬಗೆಯ 500ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಶಾಲೆ ಆವರಣ ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನ ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್ ಮಾತನಾಡಿ, ಪ್ರಸ್ತುತ ಪರಿಸರ ಸಂರಕ್ಷಣೆ ಬಹಳ ಅವಶ್ಯಕವಾಗಿದೆ. ಕ್ಲಬ್‍ನಿಂದ ಪರಿಸರ ಸಂರಕ್ಷಣೆಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.  
ಪರಿಸರ ಕುರಿತು ಮಕ್ಕಳು ನಾಟಕ ಪ್ರದರ್ಶಿಸಿದರು. ಚಿತ್ರ ರಚನೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಜಾಫರ್ ಸಾದಿಕ್, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಪ್ರಭು ತಟ್ಟಪಟಿ ಇದ್ದರು.
ಶಾಲೆಯ ಸಂಸ್ಥಾಪಕ ನಿರಂಜನ ಶಿವಲಂತ ಸ್ವಾಗತಿಸಿದರು.
ಇದಕ್ಕೂ ಮೊದಲು ರೋಟರಿ ಕ್ಲಬ್ ಸದಸ್ಯರು ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ನಿಸರ್ಗ ಚಾರಣ ನಡೆಸಿದರು. ನಿಸರ್ಗ ಹಾಗೂ ಜೀವ ವೈವಿಧ್ಯತೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net