ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರ

press day1
Published on

ಬೀದರ್: ಸಮಾಜದ ಸಮಗ್ರ ಅಭಿವೃದ್ಧಿ ಮತ್ತು ಬದಲಾವಣೆ ತರುವಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಹೇಳಿದರು.
ಇಲ್ಲಿನ ಐಎಂಎ ಹಾಲ್ ನಲ್ಲಿ ರೋಟರಿ ಕ್ಲಬ್ ಬೀದರ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವದ ಮೂರು ಅಂಗಗಳು ಶಾಸನಬದ್ಧವಾಗಿದೆ. ಆದರೆ ಪತ್ರಿಕಾ ರಂಗಕ್ಕೆ ಸಮಾಜವೇ ನಾಲ್ಕನೆಯ ಅಂಗದ ಸ್ಥಾನಮಾನ ಕೊಟ್ಟಿದೆ. ಇದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವ ಮಹತ್ವದ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರದಲ್ಲಿರುವ ಎಲ್ಲರ ಮೇಲಿದೆ ಎಂದರು.
ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ, ಸದಾನಂದ ಜೋಶಿ, ಅಪ್ಪಾರಾವ್ ಸೌದಿ, ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಸಮಾಜದ ಕನ್ನಡಿಯಾಗಿ ಪತ್ರಕರ್ತರು ಕೆಲಸ ಮಾಡಬೇಕು. ಯಾವುದೇ ಸ್ಥಿತಿಯಲ್ಲಿ ವಾಸ್ತವವನ್ನು ಜನರಿಗೆ ತಿಳಿಸಲು ಹಿಂದೇಟು ಹಾಕಬಾರದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಸೋಮಶೇಖರ ಬಿ.ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆ ಯಾವುದೇ ಫಲಾಪೇಕ್ಷೆ ಇಲ್ಲದೆ ಜಗತ್ತಿನ ಎಲ್ಲ ದೇಶಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಇದೀಗ ದೊಡ್ಡ ಮಟ್ಟದಲ್ಲಿ ಕಾರ್ಯಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.
ಹಿರಿಯ ರೋಟೆರಿಯನ್ಗಳಾದ ಡಾ.ರಘು ಕೃಷ್ಣಮೂರ್ತಿ, ಬಸವರಾಜ ಧನ್ನೂರ್, ಹಾವಶೆಟ್ಟಿ ಪಾಟೀಲ್ ಮಾತನಾಡಿದರು. ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಪೋಲಿಯೋ ಜಾಗೃತಿ ಕಾರ್ಯಕ್ರಮದ ಕರ್ನಾಟಕ ಅಧ್ಯಕ್ಷ ಶಿವಶಂಕರ ಕಾಮಶೆಟ್ಟಿ, ರವೀಂದ್ರನಾಥ ಮೂಲಗೆ, ಕೃಪಾಸಿಂಧು ಪಾಟೀಲ್ ಇತರರಿದ್ದರು. ಸುರೇಶ ಚನ್ನಶೆಟ್ಟಿ ನಿರೂಪಣೆ ಮಾಡಿದರು. ಪತ್ರಕರ್ತರು, ಜಾಹೀರಾತು, ಪ್ರಸಾರಾಂಗ ಪ್ರತಿನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net