ನೆಪ ಹೇಳದೆ ಅಭಿವೃದ್ಧಿಗೆ ಆದ್ಯತೆ ಕೊಡಿ

28blk1
Published on

ಭಾಲ್ಕಿ: ಅಧಿಕಾರಿಗಳು ಯಾವುದೇ ನೆಪ ಹೇಳದೆ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೀರಾವರಿ, ಕೃಷಿ, ತೋಟಗಾರಿಕೆ, ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹೀಗೆ ವಿವಿಧ ಯೋಜನೆಗಳಿಗೆ ಕೋಟ್ಯಂತರ ಅನುದಾನ ನೀಡಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರಾವರಿ ಪ್ರದೇಶ ಹೆಚ್ಚಿಸಲು ಬ್ರಿಜ್ ಕಂ ಬ್ಯಾರೇಜ್, ಬಾಂದಾರ, ಕೆರೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದರೂ ಸಮರ್ಪಕ ನೀರು ನಿಲ್ಲುತ್ತಿಲ್ಲ. ಮುಂದೆ ಹೀಗಾದಂತೆ ಎಚ್ಚರ ವಹಿಸಿ ಅರ್ಧಕ್ಕೆ ನಿಂತ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ತಾಲೂಕಿನಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಪೂರಕ ಸೌಲಭ್ಯ ಒದಗಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಈಗಿನಿಂದಲೇ ಕ್ರಮ ವಹಿಸಬೇಕು. ಹೆಚ್ಚುವರಿ ತರಗತಿ ನಡೆಸಬೇಕು. ಶಿಥಿಲ ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನ ನೀಡಲಾಗುವುದು. ಹೊಸದಾಗಿ ಬಿಇಒ ಕಚೇರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ಮಳೆಯಿಂದ ಸುಮಾರು 32 ಮನೆ ಕುಸಿದಿದ್ದು, ಎರಡ್ಮೂರು ದಿನದೊಳಗೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಸುಟ್ಟಿರುವ ವಿದ್ಯುತ್ ಪರಿವರ್ತಕ 24 ಗಂಟೆಯಲ್ಲಿ ಬದಲಾಯಿಸಬೇಕು ಎಂದು ಸೂಚಿಸಿದರು.
ಬೆಳೆಗೆ ಪೂರಕವಾಗಿ ಮಳೆಯಾಗಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ರಾಶಿ ವೇಳೆ ರಾಶಿ ಯಂತ್ರಗಳ ಮಾಲೀಕರು ಬೆಳೆ ಕಟಾವಿಗೆ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಕೃಷಿ ಅಧಿಕಾರಿಗಳು ಬೆಳೆ ಕಟಾವಿಗೆ ಮುನ್ನ ರಾಶಿ ಯಂತ್ರಗಳ ದರ ನಿಗದಿಪಡಿಸಿ ರೈತರ ಹೆಚ್ಚಿನ ಖರ್ಚು-ವೆಚ್ಚ ತಪ್ಪಿಸಬೇಕು ಎಂದು ಸಚಿವ ಖಂಡ್ರೆ ತಾಕೀತು ಮಾಡಿದರು.
ತಾಡಪತ್ರಿ, ಸ್ಪಿಂಕ್ಲರ್ಗಾಗಿ ಅರ್ಜಿ ಸಲ್ಲಿಸುವ ಎಲ್ಲ ರೈತರಿಗೆ ಸೌಲಭ್ಯ ಒದಗಿಸಬೇಕು. ಕೃಷಿ ಇಲಾಖೆ ಬೇಡಿಕೆ ಪಟ್ಟಿ ಸಲ್ಲಿಸಿದರೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು. ಕೃಷಿ ಭಾಗ್ಯ ಯೋಜನೆಯಡಿ ಈಗಿನಿಂದಲೇ ಕೃಷಿ ಹೊಂಡಕ್ಕಾಗಿ ರೈತರು ಸಲ್ಲಿಸುವ ಅರ್ಜಿ ಸ್ವೀಕರಿಸಬೇಕು. ಕಳೆದ ವರ್ಷ ಬೆಳೆ ವಿಮೆ ಪರಿಹಾರ ತಪ್ಪಿದ ಅರ್ಹರನ್ನು ಗುರುತಿಸಿ ಕೊಡಬೇಕು ಎಂದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸಿ ಪ್ರಕಾಶ ಕುದುರೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ, ತಾಪಂ ಇಒ ಸೂರ್ಯಕಾಂತ ಬಿರಾದಾರ್, ಎಡಿ ಚಂದ್ರಶೇಖರ ಬನ್ನಾಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net