ಪರಿಶಿಷ್ಟರ ಮೀಸಲು ಹಣ ದುರ್ಬಳಕೆ

bsp
Published on

ಬೀದರ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ 70 ಸಾವಿರ ಕೋಟಿ ಅನುದಾನವನ್ನು ಬಿಜೆಪಿ, ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಹಣವನ್ನು ಮರಳಿ ಪರಿಶಿಷ್ಟರ ಅಭಿವೃದ್ಧಿಗೆ ಉಪಯೋಗಿಸಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜಿಲ್ಲಾ ಘಟಕ ಆಗ್ರಹಿಸಿದೆ.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪಕ್ಷದ ಪ್ರಮುಖರು, ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯನ್ನು 2013-14ರಲ್ಲಿ ಜಾರಿಗೆ ತರಲಾಗಿತ್ತು. ಇದರಡಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗ ಮೀಸಲಿಡಲು ಅನಿಯಮ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಸುಮಾರು 19 ಸಾವಿರ ಕೋಟಿ ರೂ. ಅನ್ಯ ಯೋಜನೆಗಳಿಗೆ ಬಳಸಿಕೊಂಡಿದೆ. ಬಿಜೆಪಿ ಆಡಳಿತದಲ್ಲಿ ಭೋವಿ, ಡಾ.ಅಂಬೇಡ್ಕರ್, ಆದಿಜಾಂಬವ ಅಭಿವೃದ್ಧಿ ನಿಗಮಗಳಲ್ಲಿ ಹತ್ತಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಈಚೆಗೆ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣ ಪರಿಶಿಷ್ಟರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.
2014-15ರಿಂದ ಈವರೆಗೆ ಮೀಸಲಿಟ್ಟ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣದಿಂದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣವರೆಗೆ ಉಚಿತ ಬೋಧನೆ, ನಿರುದ್ಯೋಗಿ ಯುವಕರ ಸ್ವಯಂ ಉದ್ಯೋಗಕ್ಕೆ ನೆರವು, ವಸತಿರಹಿತರಿಗೆ ಸ್ವಂತ ಮನೆ ಇತ್ಯಾದಿ ಸೌಲಭ್ಯ ಕಲ್ಪಿಸಬಹುದಿತ್ತು. ರಾಜ್ಯಪಾಲರು ಮಧ್ಯಪ್ರವೇಶಿಸಿ ಅನುದಾನ ದುರ್ಬಳಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಅನ್ಯ ಉದ್ಯೇಶಕ್ಕೆ ಕೊಟ್ಟಿರುವ ಹಣವನ್ನು ಮರಳಿ ಪಡೆದು ಪರಿಶಿಷ್ಟರ ಕಲ್ಯಾಣಕ್ಕೆ ಬಳಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಜಿಲ್ಲಾಧ್ಯಕ್ಷ ಅಶೋಕ ಮಂಠಾಳಕರ್, ಯೋಹನ್ ಡಿಸೋಜಾ ಚಿಲ್ಲರ್ಗೆ, ಸಂಜುಕುಮಾರ ಮೇಧಾ, ಗುಣವಂತ ಸೂರ್ಯವಂಶಿ, ಪುಟ್ಟರಾಜ ನಂದಿ, ಶಕ್ತಿಕಾಂತ ಭಾವಿದೊಡ್ಡಿ, ಜಿ.ಆಸ್ಕರ್, ಸತ್ಯದೀಪ ಹಾವನೂರ, ಶಾದ್ರಕ್, ದತ್ತಪ್ಪ ಭಂಡಾರಿ, ಜಾಫರ್, ಶ್ರೀಮಂತ ಬಗದಲ್, ಸೋಪಾನರಾವ ಡೊಂಗರೆ, ಉಮೇಶ ಗುತ್ತೇದಾರ್, ಶಂಕರ ಫುಲೆ, ನಾಗನಾಥ ಭಂಗಾರೆ, ಪ್ರದೀಪ ಎಂ., ರಜನಿಕಾಂತ ನಾಯಕ್, ಅಶೋಕ ಬುಡನೋರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net