

ಬೀದರ್: ಇಲ್ಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಾಲ್ಕು ಕೋರ್ಸ್‍ಗಳ ಅಧ್ಯಯನಕ್ಕೆ ಅವಕಾಶ ಇದೆ ಎಂದು ಕಾಲೇಜು ಪ್ರಾಚಾರ್ಯ ಡಾ. ದೇವೇಂದ್ರ ಹಂಚೆ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಹಿಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಕೋರ್ಸ್‍ಗಳಷ್ಟೇ ಇದ್ದವು. ಪ್ರಸಕ್ತ ಸಾಲಿನಿಂದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಕೋರ್ಸ್‍ಗಳಿಗೂ ಅನುಮತಿ ಕೊಡಲಾಗಿದೆ. ಸಿವಿಲ್ ಇಂಜಿನಿಯರಿಂಗ್‍ನಲ್ಲಿ 30 ಹಾಗೂ ಉಳಿದ ಕೋರ್ಸ್‍ಗಳಲ್ಲಿ ತಲಾ 60 ಸ್ಥಾನಗಳಿವೆ ಎಂದು ಹೇಳಿದ್ದಾರೆ.
ಕಾಲೇಜಿನಲ್ಲಿ ಸಕಲ ಸೌಕರ್ಯಗಳು ಇವೆ. ವಿದ್ಯಾರ್ಥಿ ವಸತಿ ನಿಲಯವೂ ಇದೆ. ಈಗಾಗಲೇ ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಆರಂಭವಾಗಿರುವ ಕಾರಣ ಜಿಲ್ಲೆಯ ವಿದ್ಯಾರ್ಥಿಗಳು ಮೊದಲ ಆದ್ಯತೆಯಾಗಿ ಕಾಲೇಜು (ಕೆಸಿಇಟಿ ಕಾಲೇಜು ಕೋಡ್ ಇ292) ಆಯ್ಕೆ ಮಾಡಿಕೊಳ್ಳಬೇಕು ಎಂದು ಕೋರಿದ್ದಾರೆ.
ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯ ಪ್ರಮಾಣ ಪತ್ರ ಹೊಂದಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಶೇ 80 ರಷ್ಟು ಮೀಸಲು ಇದೆ. ವಾರ್ಷಿಕ ರೂ. 42,116 ಸಾವಿರ ಶುಲ್ಕ ಮಾತ್ರ ಇದೆ. ಶಿಷ್ಯವೇತನ ಸೌಲಭ್ಯ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನದಿಂದ ಶುಲ್ಕ ಭರಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ.