

ಬೀದರ್: ಕನ್ನಡ ಶಾಲೆ ರಕ್ಷಿಸಿ-ಕರ್ನಾಟಕ ಉಳಿಸಿ ಹಾಗೂ ಖಾಸಗಿ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಗುರುವಾರ ಬೀದರ್ ಸೇರಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 42 ತಾಲೂಕುಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕಕ ಅನುದಾನರಹಿತ ಖಾಸಗಿ ಶಾಲೆ ಆಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ಕನ್ನಡ ಶಾಲೆ ರಕ್ಷಣೆ, ಶಾಲೆಗಳ ಪರವಾನಗಿ ನವೀಕರಣ ಸರಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸದ್ದರಿಂದ ಹೋರಾಟ ಮಾಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
2009ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 1995ಕ್ಕೂ ಮೊದಲಿನ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿತು. ಆದರೆ 1995ರ ನಂತರ ಶುರುವಾದ ಸಾವಿರಾರು ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಪರಿಗಣಿಸಿಲ್ಲ. ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳನ್ನು ಕರ್ನಾಟಕ ಆಂಗ್ಲ ಪಬ್ಲಿಕ್ ಶಾಲೆಗಳಾಗಿ ಮಾಡಲು ಹೊರಟಿದೆ ಎಂದು ದೂರಿದರು.
ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು. ಪರವಾನಗಿ ನವೀಕರಣ ಸರಳಗೊಳಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದ ಆರ್.ಟಿಇ ಮರು ಜಾರಿಗೊಳಿಸಬೇಕು. 20ರಿಂದ 25 ವರ್ಷಗಳಿಂದ ನಡೆಸುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರದ ಅನುಮತಿ ಇಲ್ಲದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗೀರೆ ಮಾತನಾಡಿ, ಏಳು ಜಿಲ್ಲೆಗಳಲ್ಲಿ ನಡೆಯುವ ಹೋರಾಟದಲ್ಲಿ ಸಂಘದ ಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ಕೋರಿದರು.
ಸರ್ಕಾರದ ಬಿಗಿ ನಿಯಮಗಳಿಂದಾಗಿ ಪ್ರಸ್ತುತ ಖಾಸಗಿ ಶಾಲೆಗಳನ್ನು ನಡೆಸುವುದು ಕಷ್ಟಕರವಾಗಿದೆ. ಅನುದಾನಕ್ಕೆ ಒಳಪಡಿಸದ ಕಾರಣ ಆರ್ಥಿಕ ಸಮಸ್ಯೆ ಮಧ್ಯೆಯೂ ನಡೆಸಿಕೊಂಡು ಬರುತ್ತಿರುವ ಶಾಲೆಗಳು ಸಂಕಷ್ಟದಲ್ಲಿವೆ. ಸರ್ಕಾರ ತಕ್ಷಣ ನೆರವಿಗೆ ಬರಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥರಡ್ಡಿ, ಸಂಘಟನಾ ಕಾರ್ಯದರ್ಶಿ ಮಹ್ಮದ್ ಸಲಾಹೊದ್ದೀನ್ ಫರಾಹ್, ಬೀದರ್ ತಾಲೂಕು ಅಧ್ಯಕ್ಷ ಸಂದೀಪ ಶೆಟಕಾರ್, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ, ಗಣಪತಿ ಸೋಲಪುರ, ಸಂತೋಷ ಮಂಗಳೂರೆ, ಶರದ ಘಂಟೆ ಇತರರಿದ್ದರು.