ಸಾಮಾಜಿಕ ಬದ್ಧತೆಗೆ ಆದ್ಯತೆ ಕೊಡಿ

Patrike din
Published on

ಬೀದರ್: ಪತ್ರಕರ್ತರು ವೈಯಕ್ತಿಕ ವಿಚಾರಗಳಿಗಿಂತ ಸಾಮಾಜಿಕ ಬದ್ಧತೆಗೆ ಮೊದಲ ಆದ್ಯತೆ ಕೊಡಬೇಕು. ಸಮಾಜ ಸುಧಾರಣೆಯಂಥ ಸುದ್ದಿಗಳತ್ತ ಗಮನಹರಿಸಬೇಕು ಎಂದು ಕಲಬುರಗಿ ಶರಣಬಸವೇಶ್ವರ ವಿಶ್ವವಿದ್ಯಾಲಯ ಮಾಧ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಸಲಹೆ ನೀಡಿದರು.
ನಗರದಲ್ಲಿ ವಚನ ಚಾರಿಟೇಬಲ್ ಸೊಸೈಟಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವ್ಯವಸ್ಥೆಯ ಕನ್ನಡಿ ಪತ್ರಿಕೆಗಳು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಪ್ರಜಾಪ್ರಭುತ್ವಕ್ಕೊಂದು ಮೌಲ್ಯ ಬರಲಿದೆ. ಪತ್ರಕರ್ತರು ಒತ್ತಡದ ಬದುಕಿನಲ್ಲಿ ಸಿಲುಕಿ ಸ್ವಾತಂತ್ರ್ಯ ಕಳೆದುಕೊಂಡಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಹಿಂದೆ ಪತ್ರಿಕೆಯಲ್ಲಿ ಬಂದ ವರದಿ ಸರ್ಕಾರ ಮತ್ತು ಸಮಾಜದಲ್ಲಿ ಸಾಕಷ್ಟು ಚರ್ಚೆಯಾದ ಉದಾಹರಣೆಗಳಿವೆ. ಹೀಗಾಗಿ ಪತ್ರಿಕೆಗಳು ನೈಜ ವರದಿಯತ್ತ ಹೆಚ್ಚು ಗಮನ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಚನ ಮೀಡಿಯಾ ಹೌಸ್ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಸಿದ್ದು ಯಾಪಲಪರವಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ್ಯ ಸ್ಥಾನವಿದೆ. ಇದರೊಂದಿಗೆ ಪತ್ರಿಕಾ ರಂಗಕ್ಕೂ ಅಷ್ಟೇ ಗೌರವವಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಪತ್ರಕರ್ತರ ಸೇವೆ ವರ್ಣಿಸಲು ಸಾಧ್ಯವಿಲ್ಲ. ಚಳಿ, ಮಳೆ, ಬಿಸಿಲು ಎನ್ನದೆ ಕಷ್ಟಗಳನ್ನು ಸಹಿಸಿಕೊಂಡು ಸಮಾಜಕ್ಕೆ ಸುದ್ದಿ ಮುಟ್ಟಿಸುವ ಕಾರ್ಯ ಅಸ್ಮರಣೀಯ. ಸರ್ಕಾರ ಸಣ್ಣ ಪತ್ರಿಕೆಗಳ ವಿತರಕರು, ವರದಿಗಾರರಿಗೆ ಸಹಾಯ, ಸಹಕಾರ ನೀಡಿ ಅವರ ಬದುಕಿಗೆ ನೆರವಾಗಬೇಕು ಎಂದರು.
ಹಿರಿಯ ಪತ್ರಕರ್ತರಾದ ಸದಾನಂದ ಜೋಶಿ, ಅಪ್ಪಾರಾವ ಸೌದಿ ಮಾತನಾಡಿದರು. ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಪಾಟೀಲ್, ನಿಕಟಪೂರ್ವ ಅಧ್ಯಕ್ಷೆ ಲಿಂಗಾರತಿ ನಾವದಗೇರೆ, ಪ್ರಕಾಶ ಗಂದಿಗುಡೆ, ಅಲ್ಲಮಪ್ರಭು ನಾವದಗೇರೆ, ವೈಜಿನಾಥ ಸಜ್ಜನಶೆಟ್ಟಿ ಇತರರಿದ್ದರು.
ವಚನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಿವಕುಮಾರ ಸಾಲಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಣೆ ಮಾಡಿದರು. ಜಗನ್ನಾಥ ಶಿವಯೋಗಿ ವಂದಿಸಿದರು. ಸಂಪಾದಕರು, ವರದಿಗಾರರು, ಜಾಹೀರಾತು ಪ್ರತಿನಿಗಳು, ಪ್ರಸಾರಾಂಗ ಪ್ರತಿನಿಧಿಗಳು ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net