ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಿ

dc office meeting
Published on

ಬೀದರ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅಡಿ ಜಿಲ್ಲೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಕೃಷಿ ಇತರ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಬರದಿಂದ ಸಾಕಷ್ಟು ಬೆಳೆಗಳು ಹಾನಿಯಾಗಿ ರೈತರಿಗೆ ಆರ್ಥಿಕ ನಷ್ಟ ಎದುರಾಗಿತ್ತು. ಆದರೆ ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಸಾಕಷ್ಟು ಸಹಾಯವಾಗಿತ್ತು ಎಂದರು.
ವಿಮೆ ನೋಂದಣಿಗೆ ಒಳಗೊಂಡಿರುವ ವ್ಯಾಪ್ತಿಯಲ್ಲಿ ಮಳೆ ಅಭಾವದಿಂದ ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆಯಾದ ಸಂದರ್ಭ ಸೇರಿ ಸಾಕಷ್ಟು ಕಾರಣಗಳಿಂದ ಬೆಳೆ ಹಾನಿ ಉಂಟಾದ ರೈತರಿಗೆ ವಿಮೆ ನೆರವಿಗೆ ಬರುತ್ತದೆ. ಮುಂಗಾರಿನ ಬೆಳೆಗಳಿಗೆ ಜು.31ರೊಳಗೆ ವಿಮೆ ಮಾಡಿಸುವಂತೆ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯವರು ಗ್ರಾಮ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ತಿಳಿಹೇಳಬೇಕು ಎಂದು ಸೂಚಿಸಿದರು.
ಭಾರಿ ಮಳೆಯಿಂದ ಬೆಳೆ, ಮಾನವ ಮತ್ತು ಪ್ರಾಣಿಜೀವ, ಮನೆ ಹಾನಿ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ಇತರ ಅಧಿಕಾರಿಗಳು ಕೂಡಲೇ ಜಿಲ್ಲಾಡಳಿತ ಗಮನಕ್ಕೆ ತರಬೇಕು. ರಸ್ತೆ, ಅಂಗನವಾಡಿ, ಶಾಲಾ ಕಟ್ಟಡಗಳು ಹಾಳಾಗಿದ್ದರೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಾರಿ ಮಳೆ ಮುನ್ಸೂಚನೆ ಇದ್ದಲ್ಲಿ ಜಿಲ್ಲೆಯ ಮಾಂಜ್ರಾ ನದಿ ದಂಡೆಯಲ್ಲಿರುವ ಹಳ್ಳಿಗರಿಗೆ ನದಿ ಬಳಿ ಹೋಗದಂತೆ ಡಂಗೂರ ಮೂಲಕ ತಿಳಿಸಬೇಕು. ಧನೆಗಾಂವ, ಕಾರಂಜಾ ಜಲಾಶಯಗಳಿಂದ ನೀರು ಹರಿಸಿದ್ದರೆ ನದಿ ತೀರದ ಮನೆಗಳಿಗೆ ನುಗ್ಗುವ ಸಂಭವವಿರುವ ಕಡೆ ಗಂಜಿ ಕೇಂದ್ರಗಳನ್ನು ಗುರುತಿಸಬೇಕು. ಅಗತ್ಯವಿದ್ದಲ್ಲಿ ಗ್ರಾಮಸ್ಥ ಸ್ಥಳಾಂತರಿಸಲು ತಹಸೀಲ್ದಾರ್ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯ ಪ್ರಮುಖ ಜಲಾಶಯ ಮತ್ತು ಕೆರೆಗಳಲ್ಲಿ ಸಾರ್ವಜನಿಕರು ಈಜಾಡುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಮತ್ತು ಭಾರಿ ಮಳೆ ಸಂಭವಿಸಿದ್ದಲ್ಲಿ ಸಾರ್ವಜನಿಕರು ಜಲಾಶಯ ಮತ್ತು ಕೆರೆ ವೀಕ್ಷಿಸಲು ಹೋಗದಂತೆ ಕೆಎನ್ಎನ್ಎಲ್ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಮಳೆ ಅಭಾವ, ಶುಷ್ಕ ಪರಿಸ್ಥಿತಿ, ಪ್ರವಾಹಗಳಿಂದ ಬೆಳೆ ಮುಳುಗಡೆಯಾದ ವೇಳೆ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸುತ್ತದೆ. ಈ ವೇಳೆ ರೈತರಿಗೆ ಬೆಳೆ ವಿಮೆ ನೆರವಿಗೆ ಬರುತ್ತದೆ. ಇದಲ್ಲದೆ ಗುಡುಗು-ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದ್ದಲ್ಲಿ ಸಮಗ್ರ ವಿಮಾ ಭದ್ರತೆ ಒದಗಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ಡಿಡಿಪಿಐ ಸಲೀಂ ಪಾಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net