ವಿಧೇಯಕ ಮಂಡನೆಗೆ ಒತ್ತಾಯ

Somnath Mudhool
Published on

ಬೀದರ್: ರಾಜ್ಯದ ಖಾಸಗಿ ಕಂಪನಿಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವ ವಿಧೇಯಕವನ್ನು ಕೂಡಲೇ ಮಂಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಖಾಸಗಿ ಕಂಪನಿಗಳ ಒತ್ತಡದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದ ವಿಧೇಯಕ ಮಂಡನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯುತ್ತಿರುವುದು ಸರಿಯಲ್ಲ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದ್ದಾರೆ.
ಕನ್ನಡ ನೆಲದಲ್ಲೇ ಕನ್ನಡಿಗರಿಗೆ ಮೀಸಲು ಕಲ್ಪಿಸಲು ಹಿಂದೇಟು ಹಾಕಿದರೆ ಹೇಗೆ, ಬೇರೆ ರಾಜ್ಯಗಳಲ್ಲಿ ಅದನ್ನು ಜಾರಿಗೆ ತರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರು ಯಾವುದರಲ್ಲೂ ಹಿಂದೆ ಉಳಿದಿಲ್ಲ. ದೇಶ, ವಿದೇಶದ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದರಿಂದ ಖಾಸಗಿ ಕಂಪನಿಗಳಿಗೆ ಅನುಕೂಲವೇ ಆಗಲಿದೆ ಎಂದು ತಿಳಿಸಿದ್ದಾರೆ.
ಕನ್ನಡಿಗರಿಗೆ ಮೀಸಲಾತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಇರುವ ರಾಜ್ಯದ ಬ್ರ್ಯಾಂಡಿಂಗ್‍ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಖಾಸಗಿ ಕಂಪನಿಗಳು ಬೇರೆಡೆ ಸ್ಥಳಾಂತರಗೊಳ್ಳುವುದೂ ಇಲ್ಲ. ಕಾರಣ ಸರ್ಕಾರ ಖಾಸಗಿ ಕಂಪನಿಗಳ ಬ್ಲಾಕ್‍ಮೇಲ್ ತಂತ್ರಕ್ಕೆ ಮಣಿಯಬಾರದು. ಕೂಡಲೇ ಮಸೂದೆ ಮಂಡಿಸಿ ಕನ್ನಡಿಗರ ಹಿತ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net