ಮೌಲ್ಯಯುತ ಬದುಕು ರೂಪಿಸಿಕೊಳ್ಳಿ

Gnyana Sudha
Published on

ಬೀದರ್: ವಿದ್ಯಾರ್ಥಿಗಳು ಮೊದಲು ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗೌರವ, ಮೌಲ್ಯಯುತ ಬದುಕು ರೂಪಿಸಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಕಿವಿಮಾತು ಹೇಳಿದರು.
ಜ್ಞಾನಸುಧಾ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆದ ವಿದ್ಯಾಲಯದ ವಿದ್ಯಾರ್ಥಿನಿ ವಸುಂಧರಾ ಖೂಬಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಬೌದ್ಧಿಕ ಮಟ್ಟ ವೃದ್ಧಿಸಿಕೊಳ್ಳುವ ಜತೆಗೆ ಮಾನವೀಯ ಗುಣ ಮೈಗೂಡಿಸಿಕೊಳ್ಳಬೇಕು. ಆಸಕ್ತಿ ಇರುವ ಕ್ಷೇತ್ರದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಾಸಲು ಶ್ರಮಿಸಬೇಕು ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಿಮಾ ಜಿ. ಮಾತನಾಡಿ, ನಮ್ಮ ವಿದ್ಯಾಲಯದಲ್ಲಿ ಎಲ್ಕೆಜಿಯಿಂದ 10ನೇ ತರಗತಿವರೆಗೆ ಅಭ್ಯಸಿಸಿದ ವಸುಂಧರಾ ಮುಂದಿನ ವ್ಯಾಸಂಗ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಡಲು ಅರ್ಹತೆ ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಲಯದ ನಿರ್ದೇಶಕ ಡಾ.ಮುನೇಶ್ವರ ಲಾಖಾ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಬಹಷ್ಟಳು ಶ್ರಮಪಡುತ್ತಾರೆ. ಆ ಶ್ರಮ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ವಸುಂಧರಾ ಮಾತನಾಡಿ, ಪರಿಶ್ರಮವಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಸರಿಯಾಗಿ ಆಲಿಸಬೇಕು ಎಂದು ಹೇಳಿದರು.
ಪ್ರಾಚಾರ್ಯೆ ಸುನೀತಾ ಸ್ವಾಮಿ, ಉಪ ಪ್ರಾಚಾರ್ಯೆ ಕಲ್ಪನಾ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ, ವಸೀಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net