

ಬೀದರ್: ಆಂಗ್ಲ ಭಾಷೆ ಓದಿ. ಆದರೆ ಕನ್ನಡವನ್ನು ಯಾವತ್ತೂ ಮರೆಮಾಚದಿರಿ. ಮಾತೃಭಾಷೆ ಕನ್ನಡ ಬಗ್ಗೆ ಕಾಳಜಿ ಸಾಲದು, ಭಾಷಾ ಬೆಳವಣಿಗೆಗೆ ಕೈಜೋಡಿಸುವ ಅಗತ್ಯವಿದೆ. ಕನ್ನಡ ಕರುಳಿನ ಭಾಷೆ. ಇದರ ಅಳಿವು-ಉಳಿವು ನಮ್ಮ ಕೈಯಲ್ಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ವೈದ್ಯರ ದಿನ, ಸಂಶೋಧಕ ಡಾ.ಸಂತೋಷ ಹಾನಗಲ್ ಅವರ ವೀರ ಸೌದಾಮಿನಿ ಕಿತ್ತೂರು ರಾಣಿ ಚನ್ನಮ್ಮ ಚಿತ್ರ ಸಂಪುಟ ಲೋಕಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯುವ ಜನಾಂಗದಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯ ಕೊರತೆ ಎದ್ದು ಕಾಣುತ್ತಿದೆ. ಪಂಪ, ರನ್ನ, ಜನ್ನ, ಬಸವಣ್ಣನವರ ವ್ಯಕ್ತಿತ್ವ ಎಲ್ಲೆಡೆ ಮೊಳಗಬೇಕಾಗಿದೆ ಎಂದರು.
ಭಾಷೆ ಮೇಲಿನ ಹಿಡಿತ ದಿನೇದಿನೆ ಕಡಿಮೆಯಾಗುತ್ತಿದೆ. ಪ್ರಾಧಿಕಾರದಿಂದ ಬೀದರ್ ನಿಂದಲೇ ಸರ್ವಜನಾಂಗದ ಶಾಂತಿಯ ತೋಟ ಶೀರ್ಷಿಕೆಯಡಿ ಜನಾಂದೋಲನ ಕಾರ್ಯಕ್ರಮ ಆರಂಭಿಸುವುದಾಗಿ ತಿಳಿಸಿದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಪಾಧ್ಯಕ್ಷ ಡಾ.ಆಂಜನಪ್ಪ ಮಾತನಾಡಿ, ಮೊದಲು ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ಉತ್ತಮ ಭಾವನೆ ಮೈಗೂಡಿಸಿಕೊಳ್ಳಬೇಕು. ಮಾತೃಭಾಷೆ ಕನ್ನಡದಲ್ಲಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇಂದಿನ ಯುವ ಸಮೂಹ ಕನ್ನಡ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್, ಪ್ರಮುಖರಾದ ಡಾ.ವೀರಶೆಟ್ಟಿ ಗಾರಂಪಳ್ಳಿ, ಡಾ.ಸಂತೋಷ ಹಾನಗಲ್, ಡಾ.ಸಂಜಯ ಚಂದಾ, ನಾಗೇಶ ಪಾಟೀಲ್, ಡಾ.ಸಿ. ಆನಂದರಾವ ಇತರರಿದ್ದರು. ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಣೆ ಮಾಡಿದರು. ಟಿ.ಎಂ. ಮಚ್ಚೆ ವಂದಿಸಿದರು. ಕಿತ್ತೂರು ರಾಣಿ ಚನ್ನಮ್ಮ ಚಿತ್ರ ಸಂಪುಟವನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಜಿ. ಬಿಡುಗಡೆ ಮಾಡಿದರು.
58 ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಪ್ರೌಢಶಾಲೆವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ನೀಟ್ ನಲ್ಲಿ 720ಕ್ಕೆ 450ಕ್ಕೂ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ 58 ಮಕ್ಕಳಿಗೆ ಪ್ರತಿಭಾರ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ರಾಜ್ಯ ವೈದ್ಯ ರತ್ನ ಪ್ರಶಸ್ತಿ ಪಡೆದ ಡಾ.ಕಿರಣ ಪಾಟೀಲ್, ಡಾ ಶಂಕ್ರೆಪ್ಪ ಬೊಮ್ಮ, ಡಾ.ರವಿಶಂಕರ ಖಂಡ್ರೆ, ಡಾ.ರೇಣುಕಾ ಜಾಧವ್ ಇತರರನ್ನು ಸನ್ಮಾನಿಸಲಾಯಿತು.
ಕನ್ನಡ ಭಾಷೆ ಅಭಿವೃದ್ಧಿ ಶೇ.3.7
ದೇಶದಲ್ಲಿ ಹಿಂದಿ ಸೇರಿ ವಿವಿಧ ಭಾಷೆಗಳ ಅಭಿವೃದ್ಧಿ ಉತ್ತಮವಾಗಿದೆ. ಆದರೆ ನಮ್ಮ ಮಾತೃಭಾಷೆ ಕನ್ನಡ ಬೆಳವಣಿಗೆ ಕೇವಲ ಶೇ.3.7 ಇದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು. ಕನ್ನಡ ಸೇರಿ ಭಾರತದ ಅನೇಕ ಭಾಷೆಗಳು ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭ ಇದು. ಇದಕ್ಕೆ ಅನೇಕ ಕಾರಣಗಳಿವೆ. ಆದರೆ ದೇಶದಲ್ಲಿ ಸಮರ್ಪಕವಾದ ಒಂದು ಭಾಷಾ ನೀತಿ ಇಲ್ಲದ್ದರಿಂದ ಕೆಲ ಭಾಷೆಗಳು ಅತ್ಯಂತ ತೀವ್ರವಾಗಿ ಬೆಳೆಯುತ್ತಿದ್ದರೆ, ಕೆಲವು ಪತನವಾಗುತ್ತಿವೆ ಎಂದು ಹೇಳಿದರು.
ಶತಮಾನ ಕಂಡ ಶಾಲೆಗಳ ಅಭಿವೃದ್ಧಿ
ರಾಜ್ಯದಲ್ಲಿ ಶತಮಾನ ಕಂಡ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು. 100 ವರ್ಷ ದಾಟಿದ 220 ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ಯೋಜನೆ ರೂಪಿಸುವ ಅಲೋಚನೆಯಲ್ಲಿದೆ. ರಾಜ್ಯದಲ್ಲಿ 45 ಸಾವಿರ ಕನ್ನಡ ಶಾಲೆಗಳಿದ್ದು, ಅದರಲ್ಲಿ 55 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಹಂತ-ಹಂತವಾಗಿ ಭರ್ತಿ ಮಾಡಿದ್ದರೆ ಪ್ರಸ್ತುತ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.