

ಬೀದರ್: ಕಲ್ಯಾಣ ಕರ್ನಾಟಕ ಭಾಗದ ಬೀದರ್ ಗೆ ಐಐಟಿ, ರಾಯಚೂರು ಜಿಲ್ಲೆಗೆ ಏಮ್ಸ್ ಹಾಗೂ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಬೇಕು. ಈ ಸಂಬಂಧ ಜು.23ರಂದು ಮಂಡನೆ ಆಗಲಿರುವ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ರಾಯಚೂರ ಜಿಲ್ಲೆಯಲ್ಲಿ ಆಗಬೇಕಿದ್ದ ಐಐಟಿ ಧಾರವಾಡಕ್ಕೆ ಎತ್ತಂಗಡಿ ಮಾಡಲಾಯಿತು. ಹೀಗೆ ಈ ಭಾಗದ ಜಿಲ್ಲೆಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನ್ಯಾಯ ಮಾಡುತ್ತ ಬರುತ್ತಿರುವುದರಿಂದ ಕಕದ ಎಲ್ಲ ಜಿಲ್ಲೆಗಳು ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐಐಟಿ, ಏಮ್ಸ್ ಹಾಗೂ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಕಕದ ಐದು ಸಂಸದರ ನೇತೃತ್ವದಲ್ಲಿ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕೇಂದ್ರ ಬಜೆಟ್ ನಲ್ಲಿ ಘೋಷಿಸುವಂತೆ ಒತ್ತಡ ಹೇರುವುದಾಗಿ ತಿಳಿಸಿದರು.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಕೇಂದ್ರದ ಗಮನ ಸೆಳೆಯುವ ನಿಟ್ಟಿನಲ್ಲಿ ಜು.16ರಂದು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೋರಾಡಲಾಗುವುದು. ಒಂದು ವೇಳೆ ಬಜೆಟ್ ನಲ್ಲಿ ನಿರ್ಲಕ್ಷ್ಯ ಮಾಡಿದರೆ ನವದೆಹಲಿಯ ಜಂತರ್-ಮಂತರ ನಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಡಾ.ರಜನೀಶ್ ವಾಲಿ ಮಾತನಾಡಿ, ನೆರೆಯ ಹೈದರಾಬಾದ್ನಲ್ಲಿ ಐಐಟಿ ಇದ್ದುದರಿಂದ ಬೀದರ್ ಗೆ ಸಿಗುವ ಸಾಧ್ಯತೆ ಕಮ್ಮಿ. ಹೀಗಾಗಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಿ ಸುಮಾರು ಹತ್ತು ಸಾವಿರ ಕುಟುಂಬಗಳಿಗೆ ನೆರವಾಗುವಂತೆ ರಾಜ್ಯದವರೇ ಆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶೀಘ್ರದಲ್ಲಿ ಮನವಿಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಪ್ರಮುಖರಾದ ಸುರೇಶ ಚನ್ನಶೆಟ್ಟಿ, ಶಿವಶಂಕರ ಟೋಕರೆ, ವಿನಯ ಚಿತ್ರಗಾರ, ಜಾನ್ವೆಸ್ಲಿ, ಚಂದ್ರಶೇಖರ ಪಾಟೀಲ್, ಅಶೋಕ ಮಾನೂರೆ, ಗುಂಡೇರಾವ ಪಾಟೀಲ್, ವಿನಯ ಮಾಳಗೆ ಇತರರಿದ್ದರು.