ವಿದ್ಯುತ್ ಕಂಪನಿ ಜತೆ ನೌಕರರ ಅಭಿವೃದ್ಧಿಯಾಗಲಿ

mudnale
Published on

ಬೀದರ್: ವಿದ್ಯುತ್ ಕಂಪನಿಗಳ ಬಲವರ್ಧನೆ ಜತೆಗೆ ನೌಕರರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ-659 ಜೆಸ್ಕಾಂ ವಿಭಾಗದ ನೂತನ ಉಪ ಕಾರ್ಯದರ್ಶಿ ವೀರಣ್ಣ ಮುದ್ನಾಳೆ ಹೇಳಿದರು.
ನಗರದಲ್ಲಿ ಜೆಸ್ಕಾಂ ಸ್ಥಳೀಯ ಸಮಿತಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ವಿದ್ಯುತ್ ಕಂಪನಿಗಳು ಉಳಿದರೆ ನಾವು ಇರುತ್ತೇವೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಕಂಪನಿಗಳ ಬಲವರ್ಧನೆಗೆ ಎಲ್ಲ ನೌಕರರು ಶ್ರಮಿಸಬೇಕು ಎಂದು ಕೋರಿದರು.
ಮೂರು ಬಾರಿ ಬೀದರ್ ವೃತ್ತದ ಸಂಘಟನಾ ಕಾರ್ಯದರ್ಶಿ, ಜೆಸ್ಕಾಂ ಕಂಪನಿ ಎರಡು ಸಲ ಉಪ ಕಾರ್ಯದರ್ಶಿಯಾಗಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿರುವೆ. ನೌಕರರಿಗೆ ವೇತನ ಪರಿಷ್ಕರಣೆ ಲಾಭ ಸಿಕ್ಕಿದ್ದು, 2027ರ ಪರಿಷ್ಕರಣೆಯೂ ಬಂಪರ್ ಇರಲಿದೆ ಎಂದರು.
ಸ್ಥಳೀಯ ಸಮಿತಿ ಅಧ್ಯಕ್ಷ ಸೂರ್ಯಕಾಂತ ಮಡಿವಾಳ, ಕಾರ್ಯದರ್ಶಿ ಮಹೇಶ ಘಾಳೆ, ಹಿರಿಯ ಕಾರ್ಮಿಕ ಮುಖಂಡ ಕಾಶೀನಾಥ ಬೆಲ್ದಾಳೆ, ಪ್ರಮುಖರಾದ ಅಖಿಲ್ ಪಾಶಾ, ಆನಂದ, ಪರಮೇಶ, ಸತೀಶಚಂದ್ರ, ದಿಗಂಬರ ಉಪಸ್ಥಿತರಿದ್ದರು.
ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ನೂತನ ಸದಸ್ಯ ಸೂರ್ಯಕಾಂತ ಬಾಳೋಸ್ಕರ್, ಬೀದರ್ ವೃತ್ತದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಭರತ ಭೂಷಣ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net