

ಬೀದರ್: ಜನಸಂಖ್ಯೆ ಹೆಚ್ಚಳದಿಂದ ಆಗುವ ಪರಿಣಾಮ ಅರಿತು ನಿಯಂತ್ರಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಎಫ್.ಪಿಎಐ ಶಾಖೆ ಉಪಾಧ್ಯಕ್ಷೆ ಡಾ.ಸವಿತಾ ಚಾಕೋತೆ ಕೋರಿದರು.
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್.ಪಿಎಐ) ಬೀದರ್ ಶಾಖೆಯಿಂದ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಜನಸಂಖ್ಯೆ ದಿನ ನಿಮಿತ್ತ ಏರ್ಪಡಿಸಿದ್ದ ಅರಿವು ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಯುವ ಸಮೂಹದ ಪಾತ್ರ ಮಹತ್ವದ್ದಾಗಿದೆ ಎಂದರು.
ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ್ ಮಾತನಾಡಿ, ಜನಸಂಖ್ಯೆ ಹಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜು.11ರಂದು ಪ್ರತಿವರ್ಷ ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತದೆ. 1987ರ ಜು.11ರಂದು ವಿಶ್ವದ ಜನಸಂಖ್ಯೆ 500 ಕೋಟಿ ತಲುಪಿತ್ತು. ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು 1989ರ ಜು.11ರಂದು ಮೊದಲ ಬಾರಿ ಜನಸಂಖ್ಯೆ ದಿನ ಆಚರಿಸಿತು ಎಂದು ತಿಳಿಸಿದರು.
ಶಾಖೆ ಕಾರ್ಯಕಾರಿಣಿ ಸದಸ್ಯೆ ಪದ್ಮಜಾ ಪೋದ್ದಾರ ಮಾತನಾಡಿದರು. ಶಾಲೆ ಪ್ರಾಚಾರ್ಯ ಶರಣಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ ಸ್ವಾಗತಿಸಿದರು. ಉಪನ್ಯಾಸಕ ದೇವಿದಾಸ ವಂದಿಸಿದರು.