ಡೆಂಘೆ ಭಯ ಬೇಡ ಇರಲಿ ಮುಂಜಾಗ್ರತೆ

dho workshop
Published on

ಬೀದರ್: ಡೆಂಘೆ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ಬಗ್ಗೆ ಜನರು ಭಯಪಡದೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಡಿ ಡಿಎಚ್ಒ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಡೆಂಘೆ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣ ಕಾರ್ಯಾಗಾರದಲ್ಲಿ ಮಾತನಾಡಿ, ಯಾವುದೇ ರೀತಿಯ ಜ್ವರ ಕಾಣಿಸಿದರೂ ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಸೊಳ್ಳೆ ಕಡಿತದಿಂದ ಡೆಂಘೆ, ಚಿಕೂನ್ಗುನ್ಯಾ, ಮಲೇರಿಯಾ ಬರುತ್ತದೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯೊಳಗೆ ಮತ್ತು ಹೊರಗಡೆ ಮೇಲ್ಛಾವಣಿ ನೀರಿನ ತೊಟ್ಟಿಗಳನ್ನು ಕಡ್ಡಾಯವಾಗಿ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ತುಂಬಿದ ನಂತರ ಭದ್ರವಾಗಿ ಮುಚ್ಚಬೇಕು ಎಂದರು.
ಒಡೆದ ಬಾಟಲಿ, ಟಿನ್, ಟೈರ್ ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏರ್ ಕೂಲರ್ ನೀರನ್ನು ಆಗಾಗ್ಗೆ ಬದಲಾಯಿಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಈಡಿಸ್ ಜಾತಿಯ ಸೊಳ್ಳೆಗಳ ಉತ್ಪತ್ತಿಯಿಂದ ರೋಗ ಬರುತ್ತದೆ. ಈ ಜಾತಿಯ ಸೊಳ್ಳೆಗಳು ಮನುಷ್ಯನಿಗೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಎಂದು ಹೇಳಿದರು.
ಡೆಂಘೆ ಜ್ವರ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಒಂದು ವೈರಸ್ ಕಾಯಿಲೆ. ಇದಕ್ಕೆ ನಿಖರವಾದ ಔಷಧ ಇಲ್ಲ. ಹೀಗಾಗಿ ರೋಗ ತಡೆಗೆ ಹೆಚ್ಚಿನ ಗಮನ ನೀಡಬೇಕು. ಈ ರೋಗ ಲಕ್ಷಣಗಳು ಇದ್ದಕ್ಕಿದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಎಂದು ವಿವರಿಸಿದರು.
ಚಿಕೂನ್ ಗುನ್ಯಾ ಇದೊಂದು ಸಾಂಕ್ರಾಮಿಕ ರೋಗ. ಇದು ಚಿಕೂನ್ಗುನ್ಯಾ ಎಂಬ ವೈರಸ್‌ನಿಂದ ಬರುತ್ತದೆ. ಸೊಳ್ಳೆಗಳು ಸಾಮಾನ್ಯವಾಗಿ ನೀರು ಶೇಖರಣೆ ತೊಟ್ಟಿ, ಬ್ಯಾರಲ್, ಹೌಜ್ ಗಳಲ್ಲಿ ಉತ್ಪತ್ತಿಯಾಗುತ್ತವೆ. ಇದರ ಲಕ್ಷಣಗಳು ಜ್ವರ, ಚಳಿ, ಮೈಕೈ ನೋವು, ಕೀಲು ನೋವು, ತಲೆ ನೋವು ಮತ್ತು ಸಣ್ಣ ಮಕ್ಕಳಲ್ಲಿ ಜ್ವರ ಬರುವುದಾಗಿದೆ ಎಂದರು.
ಕಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ಅನಾಫಿಲಸ್ ಜಾತಿಯ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ಪಾಟೀಲ್ ಮಾತನಾಡಿ, ಡೆಂಘೆ ರೋಗ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರ ಬೇಕು. ಜಿಲ್ಲಾದ್ಯಂತ ಜನವರಿಯಿಂದ ಈವರೆಗೆ 63 ಡೆಂಘೆ ಪ್ರಕರಣ ದಾಖಲಾಗಿವೆ. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಸೂಕ್ತ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೊಂಗ್ರೆ. ಆರ್ಸಿಎಚ್ ಅಧಿಕಾರಿ ಡಾ.ಶಿವಶಂಕರ, ಡಾ.ಕಿರಣ ಪಾಟೀಲ್, ವಾರ್ತಾಧಿಕಾರಿ ಡಾ.ಸುರೇಶ ಜಿ., ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬ್ಳೆ ಇತರರಿದ್ದರು.

ಡಿಎಚ್ಒಗೂ ಬಿಡದ ಡೆಂಘೆ
ಎಷ್ಟೇ ಜನಜಾಗೃತಿ ಮೂಡಿಸಿದರೂ ದಿನೇದಿನೆ ಡೆಂಘೆ ಪ್ರಕರಣ ಹೆಚ್ಚುತ್ತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಧ್ಯಾನೇಶ್ವರ ನಿರಗುಡೆ ಅವರಿಗೂ ಡೆಂಘೆ ವಕ್ಕರಿಸಿತು. ಕಾರ್ಯಾಗಾರದಲ್ಲಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಅವರು, ನನಗೂ ಡೆಂಘೆ ಆಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಿರುವೆ. ಮುಂಜಾಗ್ರತಾ ಕ್ರಮ ವಹಿಸುವುದೇ ಡೆಂಘೆಗೆ ಮೊದಲ ಔಷಧ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net