

ಬೀದರ್: ಜಿಲ್ಲೆಯ ಗಡಿಭಾಗದಲ್ಲಿ ಗೋವಾ ಮಾದರಿ ಕ್ಯಾಸಿನೊ ಪ್ರಾರಂಭಿಸಲು ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶ ಉದ್ಯಮಿಗಳು ಪ್ರಯತ್ನಿಸುತ್ತಿದ್ದು, ಯಾವ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, 10 ವರ್ಷಗಳಿಂದ ಜಿಲ್ಲೆಯ ಭಂಗೂರ ಇತರ ಕಡೆ ಕ್ಯಾಸಿನೊ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ನಾನು ಸಚಿವನಿದ್ದಾಗ ಸಾಕಷ್ಟು ಒತ್ತಡ ಬಂದರೂ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕೇವಲ ಊಟೋಪಚಾರಕ್ಕೆಂದು ಅನುಮತಿ ಪಡೆದು ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಜಿಲ್ಲೆಯಲ್ಲಿ ರೈತರು, ಬಡವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಮ್ಮೆ ಕ್ಯಾಸಿನೊ ಪ್ರಭಾವಕ್ಕೆ ಒಳಗಾದರೆ ಹೊರಬರಲು ಸಾಧ್ಯವಿಲ್ಲ. ಅವರ ಕುಟುಂಬ ಬೀದಿಗೆ ಬರುತ್ತದೆ. ತೆಲಂಗಾಣದಲ್ಲಿ ಅಲ್ಲಿನ ಸಕರ್ಾರ ಕ್ಯಾಸಿನೊ ತೆರೆಯಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ಅಲ್ಲಿನ ಉದ್ಯಮಿಗಳು ನಮ್ಮ ಜಿಲ್ಲೆಯಲ್ಲಿ ಆರಂಭಿಸಲು ಯತ್ನಿಸುತ್ತಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
ಸದ್ಯ ರಾಜಕೀಯ ಪರಿಸ್ಥಿತಿ ಬದಲಾಗಿದ್ದರಿಂದ ಮತ್ತೆ ಈ ಪ್ರಯತ್ನ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ಯುವಕರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಕ್ಯಾಸಿನೊ ಪ್ರಾರಂಭಕ್ಕೆ ಅನುಮತಿ ಕೊಡಬಾರದೆಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಗುಟ್ಖಾ ತಯಾರಿಸಿ ಅಮಾಯಕ ಯುವಕರನ್ನು ಬಳಸಿಕೊಂಡು ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಾಗಿಸುತ್ತಿದ್ದು, ಈ ದಂಧೆಯಲ್ಲಿ ಪ್ರಭಾವಿಗಳ ಕೈವಾಡ ಇದೆ. ದೊಡ್ಡವರ ದುಡ್ಡಿನಾಸೆಗೆ ಯುವಕರ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಅಕ್ರಮ ಗುಟ್ಖಾ ತಯಾರಿಕೆ ಅಡ್ಡೆಗಳನ್ನು ಬಂದ್ ಮಾಡಿಸಿ ಅಕ್ರಮ ಸಾಗಣೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಔರಾದ್ ಮತ್ತು ಬಸವಕಲ್ಯಾಣ ತಾಲೂಕಿನ ಸರಹದ್ದುಗಳ ಮೂಲಕ ನಡೆದಿರುವ ಗಾಂಜಾ ಸಾಗಣೆಗೆ ಕಡಿವಾಣ ಹಾಕಬೇಕು. ಹಿಂದಿನ ಎಸ್ಪಿ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದರು. ಇದು ನಿರಂತರ ನಡೆಯುವಂಥದ್ದು. ಪೊಲೀಸ್ ಚೇಕ್ಪೋಸ್ಟ್ ಸ್ಥಾಪಿಸಿ ಸಿಬ್ಬಂದಿ ನೇಮಕ ಮಾಡಿ ಗಸ್ತು ಹೆಚ್ಚಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.