

ಬೀದರ್: ಜೈಜಗನ್ನಾಥ ರಥಯಾತ್ರೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು.
ಇಲ್ಲಿನ ರಾಂಪುರೆ ಬಡಾವಣೆಯ ಶ್ರೀಲಕ್ಷ್ಮಿ ಸತ್ಯನಾರಾಯಣ ಮಂದಿರದಿಂದ ಆರಂಭ ಯಾತ್ರೆ ಬಿವಿಬಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ಚೌಕ್, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ ಜನವಾಡ ರಸ್ತೆ ಮಾರ್ಗವಾಗಿ ಚಿಕ್ಕಪೇಟ್ ಬಳಿಯ ಜಗನ್ನಾಥ ಮಂದಿರಕ್ಕೆ ಯಾತ್ರೆ ತಲುಪಿ ಕೊನೆಗೊಂಡಿತು.
ರಥದಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಒಳಗೊಂಡ ಮೂರ್ತಿಗಳು ಇದ್ದವು. ರಥದ ಮುಂಭಾಗದಲ್ಲಿ ವಿಶೇಷವಾಗಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಜರುಗಿತು. ನಗರದ ವಿವಿಧ ವೃತ್ತಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗಾಗಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ರಥಯಾತ್ರೆ ಬಳಿಕ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ, ಭಾರೂಡ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಥೋತ್ಸವ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣನ್ ಸಾಳೆ, ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಅಧ್ಯಕ್ಷ ಡಾ.ನಿಲೇಶ್ ದೇಶಮುಖ, ಕಾರ್ಯದರ್ಶಿ ಶಿವರಾಮ ಜೋಶಿ, ರಾಜಕುಮಾರ ಅಳ್ಳೆ ಇತರರಿದ್ದರು.