

ಬೀದರ್: ಮದ್ಯಮುಕ್ತ ಬೀದರ್ ಜಿಲ್ಲೆಗಾಗಿ ಜನಜಾಗೃತಿ ವೇದಿಕೆ ಯೋಜನೆ ರೂಪಿಸಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಮದ್ಯಮುಕ್ತ ಸಮಾಜದ ಕನಸು ಕಂಡಿದ್ದರು. ಅದರ ಸಾಕಾರಕ್ಕೆ ಎಲ್ಲರ ಪ್ರಯತ್ನ ಬೇಕು. ಜನಜಾಗೃತಿ ವೇದಿಕೆ ಮೂಲಕ ಇದು ಸಾಧ್ಯ ಮತ್ತು ಯಶಸ್ವಿಯಾಗಲಿದೆ ಎಂದರು.
ಮದ್ಯ ಸೇವನೆಯಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಬಹುತೇಕರು ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಹೀಗಾಗಿ ಮದ್ಯಮುಕ್ತ ಜಿಲ್ಲೆಯಾಗಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೆ ಹುಮನಾಬಾದ್, ಭಾಲ್ಕಿಗಳಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿ ಜಾಗೃತಿ ಮೂಡಿಸಲಾಗಿದೆ. ಸೆಪ್ಟೆಂಬರ್ ನಲ್ಲಿ ಬೀದರ್ ನಲ್ಲಿ ಶಿಬಿರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಒಂದು ವರ್ಷದೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶಿಬಿರ ನಡೆಸಿ ಮದ್ಯ ಸೇರಿ ದುಶ್ಚಟಗಳನ್ನು ಬಿಡಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳ ಯೋಜನೆಯಿಂದ ಸಮಾಜದ ಪರಿವರ್ತನೆ ಸಾಧ್ಯವಾಗಿದೆ. ಇಡೀ ಜಿಲ್ಲೆಯಲ್ಲಿ ಮದ್ಯವರ್ಜನ ಶಿಬಿರ ಪರಿಣಾಮಕಾರಿಯಾಗಿ ನಡೆದರೆ ಬೀದರ್ ಮಾದರಿ ಆಗಬಲ್ಲದು. ಧರ್ಮಸ್ಥಳ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಮಾತನಾಡಿ, ಧರ್ಮಸ್ಥಳ ಯೋಜನೆಯಡಿ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಸ್ವಸಹಾಯ ಸಂಘ ರಚಿಸಿ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳ ಮೂಲಕ ಪ್ರಗತಿನಿಧಿ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಶಾಲೆಗಳಿಗೆ ಬೆಂಚ್, ಡೆಸ್ಕ್ ವಿತರಣೆ, ವೃತ್ತಿಪರ ಕೋಸ್೯ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಶಿಷ್ಯವೇತನ, ನಿರ್ಗತಿಕರಿಗೆ ಮಾಸಿಕ 1000 ರೂ. ಮಾಸಾಶನ ಜತೆ ವಾತ್ಸಲ್ಯ ಕಿಟ್ ನೀಡುವ ಮೂಲಕ ಅಡುಗೆ ಪದಾರ್ಥ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯಿಂದ ಗುರುತಿಸಲ್ಪಟ್ಟ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ಸದಸ್ಯರ ಅನುದಾನದಡಿ ಜಿಲ್ಲಾ ವ್ಯಾಪ್ತಿಯಲ್ಲಿ ಹೈನುಗಾರಿಕೆ ಅಭಿವೃದ್ಧಿಗಾಗಿ ಹಾಲಿನ ಸಂಘಗಳ ಡೇರಿಗಳ ಕಟ್ಟಡ ರಚನೆ, ಉಪಕರಣ ಖರೀದಿ ಮತ್ತು ಕಟ್ಟಡಗಳ ದುರಸ್ತಿ ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೇದಿಕೆ ನಿರ್ದೇಶಕರಾದ ಸೋಮನಾಥಪ್ಪ ಅಷ್ಟೂರೆ, ಡಾ.ಶಾಲಿವಾನ್ ಉದಗೀರೆ, ರಾಜು ಪಸಾರ, ಶಿವು ಲೋಖಂಡೆ, ಸಂತೋಷ ಬಿಜಿ ಪಾಟೀಲ್, ಯೋಜನೆ ಜಿಲ್ಲಾ ಅಕಾರಿ ಪ್ರವೀಣಕುಮಾರ, ತಾಲೂಕು ಯೋಜನಾಕಾರಿ ಸಂಜಯ ಇತರರಿದ್ದರು.