ಜೈಜಗನ್ನಾಥ ರಥಯಾತ್ರೆ 7ರಂದು

photo
Published on

ಬೀದರ್: ಜೈಗನ್ನಾಥ ರಥಯಾತ್ರೆ ನಗರದಲ್ಲಿ ಜು.7ರಂದು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ ಎಂದು ರಥೋತ್ಸವ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣನ್ ಸಾಳೆ ಹೇಳಿದರು.
ಓರಿಸ್ಸಾದ ಪುರಿ ಜಗನ್ನಾಥ ಮಂದಿರದಲ್ಲಿ ರಥಯಾತ್ರೆ ನಡೆಯುತಿದ್ದು, ಅದೇ ಮಾದರಿ ನಗರದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಜಗನ್ನಾಥನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿನ ರಾಂಪುರೆ ಬಡಾವಣೆಯ ಶ್ರೀಲಕ್ಷ್ಮಿ ಸತ್ಯನಾರಾಯಣ ಮಂದಿರದಿಂದ ಅಂದು ಬೆಳಗ್ಗೆ 11.30ಕ್ಕೆ ಯಾತ್ರೆ ಆರಂಭವಾಗಲಿದೆ. ಬಿವಿಬಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ಚೌಕ್, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ ಜನವಾಡ ರಸ್ತೆ ಮಾರ್ಗವಾಗಿ ಚಿಕ್ಕಪೇಟ್ ಬಳಿಯ ಜಗನ್ನಾಥ ಮಂದಿರಕ್ಕೆ ಯಾತ್ರೆ ತಲುಪಲಿದೆ ಎಂದು ವಿವರಿಸಿದರು.
ರಥದಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಒಳಗೊಂಡ ಮೂರ್ತಿಗಳ ಇರಲಿವೆ. ರಥದ ಮುಂಭಾಗದಲ್ಲಿ ವಿಶೇಷವಾಗಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಜರುಗಲಿದೆ. ಪುಣೆಯ ಕಲಾವಿದರನ್ನು ಆಹ್ವಾನಿಸಿ ರಂಗೋಲಿ ಬಿಡಿಸಲಾಗುತ್ತಿದೆ. ಎಲ್ಲ ವೃತ್ತಗಳಲ್ಲಿ ಭಕ್ತರಿಗಾಗಿ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.
ರಥಯಾತ್ರೆ ಬಳಿಕ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ, ಭಾರೂಡ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಅಧ್ಯಕ್ಷ ಡಾ. ನಿಲೇಶ್ ದೇಶಮುಖ ಮಾತನಾಡಿದರು. ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಕಾರ್ಯದರ್ಶಿ ಶಿವರಾಮ ಜೋಶಿ, ರಾಜಕುಮಾರ ಅಳ್ಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net