

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಡೆದಿದ್ದ ನಿವೇಶನ ಹಂಚಿಕೆ ಅಕ್ರಮ ಸಂಬಂಧ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
2022-23ರಲ್ಲಿ ಚಿದ್ರಿ ರಸ್ತೆಯ ಸಿದ್ದರಾಮಯ್ಯ ಬಡಾವಣೆ ಮತ್ತು ನೌಬಾದ್ ನ ವ್ಯಾಲ್ಯೂವ್ ಲೇಔಟ್ ಗಳಲ್ಲಿ ತಲಾ ಎಂಟು ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಗುನ್ನಳ್ಳಿ ಗ್ರಾಮದ ಸರ್ವೇ ನಂ.22/2, 21/1ರ 26 ಎಕರೆ ನಿವೇಶನ ಹಂಚಿಕೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಕ್ರಮ ಕುರಿತು ತನಿಖೆ ನಡೆಸುವಂತೆ ಮೇಲ್ಮನೆ ಕಲಾಪದಲ್ಲಿ ಹಿಂದೆ ಸರ್ಕಾರದ ಗಮನಕ್ಕೆ ತಂದಿದ್ದೆ. ಹಗರಣದಲ್ಲಿ ಶಾಮೀಲಾಗಿದ್ದರೆ ಹಿಂದಿನ ಬುಡಾ ಅಧ್ಯಕ್ಷರ ವಿರುದ್ಧ ಕೇಸ್ ದಾಖಲಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದಲ್ಲಿ ಅವರಿಂದ ಹಣ ವಸೂಲಿ ಮಾಡುವಂತೆ ಹಾಲಿ ಬುಡಾ ಆಯುಕ್ತರಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಹಾಲಿ ಆಯುಕ್ತ ಶ್ರೀಕಾಂತ ನಿರ್ಲಕ್ಷ್ಯ ವಹಿಸಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿಯಾಗಿ ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.
ನ್ಯಾಯವಾದಿ ಗೌತಮ ವಾಗರಾಜ ಇದ್ದರು.