ಬಸವಣ್ಣನವರ ಪಾಠ ಅನಗತ್ಯ ಗೊಂದಲ ಸೃಷ್ಟಿ

Halkatti Jayanti Photo- JLM
Published on

ಬೀದರ್: ರಾಜ್ಯ ಪಠ್ಯಕ್ರಮದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿಯ ಬಸವಣ್ಣನವರ ಪರಿಚಯದ ಪರಿಷ್ಕೃತ ಪಾಠದ ಕುರಿತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸಂಸ್ಥೆಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಇರುವ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ವಚನ ಪಿತಾಮಹ ಫ.ಗು. ಹಳಕಟ್ಟಿ ಜಯಂತಿ ಹಾಗೂ ಜಗದ್ಗುರು ಲಿಂಗಾನಂದ ಸ್ವಾಮೀಜಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾನುಯಾಯಿಗಳ ಮನವಿ ಮೇರೆಗೆ ರಾಜ್ಯ ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ, ಇತಿಹಾಸಕಾರರು ಹಾಗೂ ವಿದ್ವಾಂಸರ ಸಲಹೆ ಪಡೆದ ನಂತರವೇ ಬಸವಣ್ಣನವರ ಪಾಠವನ್ನು ಪರಿಷ್ಕರಿಸಿದೆ. ಪರಿಷ್ಕøತ ಪಾಠ ಬಸವಣ್ಣನವರ ಕುರಿತ ಸರಿಯಾದ ಮಾಹಿತಿಯನ್ನೇ ಒಳಗೊಂಡಿದೆ ಎಂದು ತಿಳಿಸಿದರು.
ಕೆಲವರು ಪಾಠದಿಂದ ವೀರಶೈವ ಪದ ಕೈಬಿಡಲಾಗಿದೆ. ಅದನ್ನು ಪುನಃ ಸೇರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ. ಸರ್ಕಾರ ಯಾವ ಕಾರಣಕ್ಕೂ ಪಾಠದಲ್ಲಿ ಮತ್ತೆ ಯಾವುದೇ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದರು.
ಬಸವಣ್ಣನವರ ಪಾಠದಲ್ಲಿ ಇತಿಹಾಸ ಆಧಾರಿತ ವಿಷಯ ಅಳವಡಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶಂಸನೀಯ. ಇದಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಭಕ್ತರ ಪರವಾಗಿ ವೈಯಕ್ತಿಕವಾಗಿ ಮುಖ್ಯಮಂತ್ರಿ ಅವರಿಗೆ ಅಭಿನಂದನಾ ಪತ್ರ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮಹಾಸಭಾ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಅವರು ಜಗದ್ಗುರು ಲಿಂಗಾನಂದ ಸ್ವಾಮೀಜಿ ಕುರಿತು ಹಾಗೂ ಮಹಾಸಭಾ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷೆ ಸುವರ್ಣಾ ಚಿಮಕೋಡೆ ಅವರು ಫ.ಗು. ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡಿದರು.
ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾಸಭಾ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಸಿದ್ದಯ್ಯ ಕಾವಡಿಮಠ, ಬಸವ ಕೇಂದ್ರದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್, ಕರುಣಾ ಶೆಟಕಾರ್, ಸುವರ್ಣಾ ಧನ್ನೂರ, ಪಂಪಾವತಿ ಪಾಟೀಲ, ಜ್ಞಾನದೇವಿ ಬಬಚೇಡಿ, ಶಾಂತಾದೇವಿ ಬಿರಾದಾರ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ, ರವಿ ಪಾಪಡೆ, ಉಮೇಶ ಗಾಯತೊಂಡ, ಮಲ್ಲಿಕಾರ್ಜುನ ಪಂಚಾಕ್ಷರಿ ಮತ್ತಿತರರು ಇದ್ದರು. ಲಕ್ಷ್ಮಿ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಭಾರತಿ ಆರ್. ಪಾಟೀಲ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net