371(ಜೆ)ಗೆ ವಿರೋಧ ಮುಂದುವರಿಸಿದರೆ ಕಕ ಬಂದ್

Revansiddappa Jalade-1
????????????????????????????????????
Published on

ಬೀದರ್: ಬೆಂಗಳೂರಿನ ಹಸಿರು ಪ್ರತಿಷ್ಠಾನ ಹಾಗೂ ಕೆಲ ಜನಪ್ರತಿನಿಧಿಗಳು ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಗೆ ವಿರೋಧ ಮಾಡುವುದನ್ನು ಮುಂದುವರಿಸಿದರೆ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಎಚ್ಚರಿಸಿದ್ದಾರೆ.
ಜೂ. 29 ರಂದು ಬೀದರ್‍ನಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಹೋರಾಟದ ಆರಂಭವಷ್ಟೇ ಆಗಿದೆ. ಕಲ್ಯಾಣ ಕರ್ನಾಟಕದ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಿದೆ. ಸಾಮಾಜಿಕ ಅಸಮತೋಲನೆ ನಿವಾರಣೆಗಾಗಿ ದೇಶದ ಅನೇಕ ಭಾಗಗಳಿಗೆ ಈ ರೀತಿಯ ಸ್ಥಾನಮಾನ ಕೊಡಲಾಗಿದೆ. ಹೀಗಾಗಿ ಇಲ್ಲಿ ಬೇರೆಯವರ ಕಸಿದುಕೊಳ್ಳುವ ಪ್ರಶ್ನೆಯೇ ಉದ್ಘವಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ರಾಜಧಾನಿಯಿಂದ 700 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿವೆ. 371(ಜೆ) ಕಾಯ್ದೆಯಿಂದ ಇದೀಗ ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವೇಶ ಹಾಗೂ ನೇಮಕಾತಿಯಲ್ಲಿ ಮೀಸಲು ದೊರಕುತ್ತಿದೆ. ಅದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು  ಕಾಯ್ದೆಯನ್ನು ತೆಗೆಯಲು ಹುನ್ನಾರ ನಡೆಸಿರುವುದು ತೀವ್ರ ಖಂಡನೀಯ ಎಂದು ತಿಳಿಸಿದ್ದಾರೆ.
371(ಜೆ) ಕಾಯ್ದೆಯಿಂದಾಗಿ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವುದು ಅರ್ಥಹೀನ. ಸರ್ಕಾರದ ಭಾಗವಾಗಿರುವ ಅವರು ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವುದಕ್ಕಾಗಿ ಜಾರಿಗೊಳಿಸಿರುವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಸಚಿವರು ಕಾಯ್ದೆಗೆ ವಿರೋಧ ಮಾಡುವುದನ್ನು ಕೈಬಿಡದಿದ್ದರೆ ಕಲ್ಯಾಣ ಕರ್ನಾಟಕದ ಜನರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
371(ಜೆ) ತಿದ್ದುಪಡಿ ಕಾಯ್ದೆಯ ಉಳಿವಿಗಾಗಿ ಕಲ್ಯಾಣ ಕರ್ನಾಟಕದ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಒಂದಾಗಬೇಕು. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net