ಕಮಲನಗರ: ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಮಲನಗರ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಗಣಿತ ಶಿಕ್ಷಕ ಮಾಧವ್ ಲಾಂಚಕರ್ ಎಂಬಾತನೇ ಅದೇ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಎಂದಿನಂತೆ ಜೂ.28ರಂದು ಶಾಲೆಗೆ ಹೋಗಿದ್ದಾಳೆ. ಕೊಠಡಿಗೆ ಬರುವಂತೆ ವಿದ್ಯಾರ್ಥಿನಿಗೆ ಶಿಕ್ಷಕ ಮಾಧವ್ ಕರೆಸಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಮೈಕೈ ಮುಟ್ಟಿಸಿ ಮಾತನಾಡಿಸಿದ್ದಾನೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ಅಂದು ಸಂಜೆ ವಿದ್ಯಾರ್ಥಿನಿ ಮನೆಗೆ ಶಿಕ್ಷಕಿ ಜಗದೇವಿ ಆಗಮಿಸಿ, ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ಮಗಳನ್ನು ಶಾಲೆಯಿಂದ ತೆಗೆದು ಹಾಕುತ್ತೇವೆ ಮತ್ತು ನಿಮ್ಮ ಮನೆಯ ಮರ್ಯಾದೆ ಹೋಗುತ್ತದೆ. ಇದನ್ನು ಇಲ್ಲಿಗೆ ಮುಚ್ಚಿ ಹಾಕಿ ಎಂದು ಬೆದರಿಕೆ ಹಾಕಿದ್ದಾಳೆ. ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಹಾಗೂ ಅವರಿಗೆ ಸಹಕರಿಸಿದ ಶಿಕ್ಷಕಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿನಿ ತಂದೆ ಸೋಮವಾರ ನೀಡಿದ ದೂರಿನ ಮೇರೆಗೆ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕ ಮತ್ತು ಶಿಕ್ಷಕಿಯನ್ನು ಪೊಲೀಸರು ಬಂಸಿದ್ದಾರೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಮೃತಪ್ಪ, ಪಿಎಸ್ಐ ಚಂದ್ರಶೇಖರ ನಿರ್ಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.