

ಬೀದರ್: ಜಾನಪದ ಸಂಸ್ಕೃತಿಯು ಪ್ರಸ್ತುತ ಮೊಬೈಲ್ ಹಾವಳಿಯಿಂದ ಮಾಯವಾಗುತ್ತಿದ್ದು, ಮರುಜೀವ ತುಂಬುವ ಕೆಲಸ ಮಾಡುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ನೂತನ ಅಧ್ಯಕ್ಷ ಶಿವಪ್ರಸಾದ ಗೊಲ್ಲಹಳ್ಳಿ ಹೇಳಿದರು.
ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಜಾನಪದ ಶ್ರೇಷ್ಠ ಪದಗಳ ಮುಂದೆ ಸಿನಿಮಾ ರಂಗ ಏನೂ ಇಲ್ಲ. ಆದರೂ ಜನ ಜಾನಪದ ಮರೆಯುತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೆಲದ ಸಂಸ್ಕೃತಿ ಪವಿತ್ರವಾಗಿದ್ದು, ಜಾತಿ ಸಮಾನತೆ ಮನೋಭಾವ ಹೊಂದಿರುವ ಜಾನಪದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಅಧ್ಯಕ್ಷನ್ನಾಗಿ ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆ. ಜಾನಪದ ಕಲಾ ಪ್ರಕಾರಗಳು ಹಾಗೂ ವಾದ್ಯಗಳಿಗೆ ಮರುಜೀವ ತುಂಬಬೇಕಿದೆ. ರಾಜ್ಯಾದ್ಯಂತ ಸಂಚರಿಸಿ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುವೆ. ಇದು ಬಸವಣ್ಣನವರು ನಡೆದಾಡಿದ ಪುಣ್ಯ ಭೂಮಿ. ಇಂಥ ಸ್ಥಳದಿಂದ ನಾನು ಸಂಚಾರ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಜತೆಗೆ ರಾಜ್ಯ ಮಟ್ಟದಲ್ಲಿ ಪರಿಚಯಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ಎಂದು ಭರವಸೆ ನೀಡಿದರು.
ಹುಮನಾಬಾದ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆ ಕಲಾವಿದರ ಬೇಡಿಕೆಗಳನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜಾನಪದ ಕಲಾವಿದರೇ ಸಾಂಸ್ಕೃತಿಕ ರಾಯಭಾರಿಗಳು. ಕಲಾವಿದರ ನಾನಾ ಸಮಸ್ಯೆಗಳಿವೆ. ಅವರ ಬದುಕು ಹಸನು ಮಾಡಲು ಅಕಾಡೆಮಿ ನೂತನ ಅಧ್ಯಕ್ಷ ಗೊಲ್ಲಹಳ್ಳಿ ಶ್ರಮಿಸಬೇಕು. ಸೌಲಭ್ಯಗಳನ್ನು ಒದಗಿಸುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಕಲಾವಿದರ ಮಾಸಾಶನ ವಯಸ್ಸು 58ರಿಂದ 50ಕ್ಕೆ ಇಳಿಸಬೇಕು. ಮಾಸಾಶನಕ್ಕೆ ಪ್ರಮಾಣಪತ್ರ ತರಬೇಕೆಂಬ ಷರತ್ತಿನಿಂದ ವಿನಾಯಿತಿ ನೀಡಬೇಕು. ಕಲಾವಿದರು ಯಾವ ಘಟನೆಯಲ್ಲಿ ಮೃತರಾದರೂ ಅವರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ಕೊಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆೆ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಫರ್ನಾಂಡಿಸ್ ಹಿಪ್ಪಳಗಾಂವ, ರಾಜಕುಮಾರ ಬನ್ನೇರ್, ಶಂಭುಲಿಂಗ ವಾಲ್ದೊಡ್ಡಿ, ಸಂಗಮ್ಮ, ಒಕ್ಕೂಟದ ಪದಾಧಿಕಾರಿಗಳಾದ ಸುನೀಲ ಕಡ್ಡೆ, ದೇವಿದಾಸ ಚಿಮಕೋಡ, ಯೇಸುದಾಸ ಅಲಿಯಂಬರ್, ಬಕ್ಕಪ್ಪ ದಂಡಿನ್, ಸಂಗಮೇಶ ಬೆಲ್ದಾಳೆ ಇತರರಿದ್ದರು.
ಹಿರಿಯ ರಂಗ ಕಲಾವಿದ ಅನೀಲ ಬಿರಾದಾರ್ ಅವರಿಗೆ 2024ರ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.