371(ಜೆ)ಗೆ ಟಚ್ ಮಾಡಿದರೆ ಸುಮ್ಮನಿರಲ್ಲ

pressmeet
Published on

ಬೀದರ್: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ವಿಧಿ ನಿಷ್ಪ್ರಯೋಜಕ ಮಾಡಲು ಮುಂದಾದರೆ ಈ ಭಾಗದ ಜನ ಸುಮ್ಮನಿರಲ್ಲ. ನಮ್ಮ ಹಕ್ಕು ಕಸಿದುಕೊಳ್ಳಲು ಯತ್ನಿಸಿದರೆ ಹೊತ್ತಿ ಉರಿಯಲಿದೆ ಎಂದು ಹೈದರಾಬಾದ್ ಕನರ್ಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಎಚ್ಚರಿಕೆ ನೀಡಿದರು.
371(ಜೆ) ಜಾರಿಗಾಗಿ 20 ವರ್ಷ ನಿರಂತರ ಹೋರಾಟ, ಸಂಕಷ್ಟಗಳ ಬಳಿಕ ಸೂಕ್ತ ಸ್ಥಾನಮಾನ ದೊರೆತಿದೆ. ಆದರೆ ಬೆಂಗಳೂರಿನ ಹಸಿರು ಪ್ರತಿಷ್ಠಾನ ಎಂದು ಹೇಳಿಕೊಳ್ಳುವ ಕೆಲ ಭಂಡರು ಸರ್ಕಾರದ ಮೇಲೆ ಒತ್ತಡ ಹೇರಿ ಇದನ್ನು ರದ್ದುಪಡಿಸಲು ಯತ್ನಿಸುತ್ತಿರುವುದನ್ನು ಸುದ್ದಿಗೋಷ್ಠಿಯಲ್ಲಿ ಅವರು ಖಂಡಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಇದಕ್ಕೆ ಪುಷ್ಠಿ ನೀಡುವಂತೆ ಸಿಎಂಗೆ ಪತ್ರ ಬರೆದು ಈ ಭಾಗದ ಎಲ್ಲ ನೇಮಕಾತಿಗಳನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಇಂತಹ ಅಸೂಯೆ ರಾಜಕೀಯಕ್ಕೆ ಸಿಎಂ ಮತ್ತು ಸರ್ಕಾರ ಬೆಲೆ ನೀಡದೆ ನಿಮ್ಮದೇ ಕೇಂದ್ರ ಸಕರ್ಾರ ಈ ಹಿಂದೆ ನೀಡಿರುವ ಈ ಸ್ಥಾನಮಾನ ಮುಂದುವರಿಸಬೇಕೆಂದು ಆಗ್ರಹಿಸಿದರು.
ಶನಿವಾರ ಬೆಳಗ್ಗೆ 10ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಶಿಕ್ಷಣ ಸಂಸ್ಥೆಗಳ ಪ್ರತಿನಿಗಳು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿ ಸುಮಾರು ಹತ್ತು ಸಾವಿರ ಜನರೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, 371(ಜೆ) ಮೀಸಲಾತಿಗೆ ಮುಟ್ಟಿದರೆ ರಕ್ತಕ್ರಾಂತಿಯಾಗಲಿದೆ. ಬೆಂಗಳೂರಿನ ಕೆಲ ಪುಢಾರಿಗಳು ಕಕ ಮೀಸಲಾತಿಗೆ ವಿರೋಧಿಸುತ್ತಿರುವುದನ್ನು ನೋಡಿಯೂ ಈ ಭಾಗದ ಸಂಸದರು, ಸಚಿವರು, ಶಾಸಕರು ಸುಮ್ಮನೆ ಕುಳಿತುಕೊಳ್ಳದೆ ಬಿಸಿ ಮುಟ್ಟಿಸಬೇಕು. ಸಚಿವ ಎಚ್.ಕೆ. ಪಾಟೀಲ್ ಕಣ್ತಪ್ಪಿನಿಂದ ಸಹಿ ಮಾಡಲಾಗಿದೆ ಎನ್ನುತ್ತಾರೆ. ಇದೆಂಥ ಬೇಜವಾಬ್ದಾರಿ ಎಂದು ಆಕ್ರೋಶ ಹೊರಹಾಕಿದರು.
ನಾವು ಮಲಗಿದರೆ ಕುಂಭಕರ್ಣ, ಎದ್ದರೆ ವೀರಭದ್ರ ಎಂಬುದನ್ನು ಸರ್ಕಾರ ಅರಿಯಬೇಕು. ರಾಜ್ಯದ ಅಖಂಡತೆಗಾಗಿ ಕಕ ಜನತೆ ಹೋರಾಡುತ್ತಿದ್ದಾರೆ. ಶರಣರು, ಸಂತರ ಭೂಮಿಯಿದು. ನಮ್ಮಲ್ಲಿ ಸ್ವಾಭಿಮಾನದ ಕಿಚ್ಚಿದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ. 371(ಜೆ) ನಮ್ಮ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಕೆಣಕಿದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡುವುದಾಗಿ ಗುಡುಗಿದರು.
ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ಹೋರಾಟದ ಸಂದರ್ಭದಲ್ಲಿ ಎರಡು ಗಂಟೆ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ವಿನಯ ಮಾಳಗೆ, ರಾಜೇಂದ್ರ ವಣಗೇರಿ, ಸುರೇಶ ಚನ್ನಶೆಟ್ಟಿ, ಶಿವಶಂಕರ ಟೋಕರೆ, ಚಂದ್ರಶೇಖರ ಪಾಟೀಲ್ ಹೋಚಕನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net