ಸಕಾಲಕ್ಕೆ ಬಸ್ ಪಾಸ್ ವಿತರಿಸಿ

abvp
Published on

ಬೀದರ್: ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣ ಬಸ್ ಪಾಸ್ ವಿತರಿಸಬೇಕು ಹಾಗೂ ಬಸ್ಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹೆಚ್ಚಾಗಿ ನಗರ ಪ್ರದೇಶಗಳ ಶಾಲಾ-ಕಾಲೇಜುಗಳನ್ನು ಅವಲಂಬಿಸಿದ್ದಾರೆ. ತರಗತಿಗಳು ಪ್ರಾರಂಭವಾದರೂ ಸರಿಯಾದ ಸಮಯಕ್ಕೆ ಬಸ್ ಪಾಸ್ ವಿತರಣೆ ಮಾಡದ್ದರಿಂದ ನಿತ್ಯ ನೂರಾರು ರೂ. ಖರ್ಚು ಮಾಡಿ ಸಂಚರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿದ ತಿಂಗಳವರೆಗೆ ಕಾಯುವ ಸ್ಥಿತಿ ಇದೆ. ಇದರಿಂದ ಬಡ ಮಕ್ಕಳು ಶಾಲಾ-ಕಾಲೇಜುಗಳಿಗೆ ಪಾಸ್ ಸಿಗುವವರೆಗೂ ಬರದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬಹಳಷ್ಟು ವ್ಯತ್ಯಾಸವಿದ್ದು, ವಿವಿ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಜಾರಿ ಮಾಡಿದ ನಂತರ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಬೇಕಾಗಿದೆ. ಸರ್ಕಾರ ಬಸ್ಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಎ., ನಗರ ಸಹ ಕಾರ್ಯದರ್ಶಿ ಶಿವಾನಿ, ಪ್ರಮುಖರಾದ ಸಾಯಿ, ಪವನ್ ಕುಂಬಾರ, ನಾಗರಾಜ ಸುಲ್ತಾನಪುರ, ಅಭಿಷೇಕ ಶಂಭು, ಮಹೇಶ, ಆನಂದ, ಪವನ್ ಪದ್ಮಾಕರ, ಹರೀಶ್, ಪ್ರಾರ್ಥನಾ, ಸೌಮ್ಯ, ಭುವನೇಶ್ವರಿ ಇತರರಿದ್ದರು. ಬೇಡಿಕೆ ಸಂಬಂಧ ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net