ಉಪ ನೋಂದಣಾಧಿಕಾರಿ ಬದಲಾವಣೆ ಮಾಡಿ

tahasil office visit
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (0, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಔರಾದ್: ಶಾಸಕ ಪ್ರಭು ಚವ್ಹಾಣ್ ಪಟ್ಟಣದ ತಹಸಿಲ್ನಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಹಣ ಕೊಡದೆ ಇಲ್ಲಿ ಯಾವ ಕೆಲಸಗಳಾಗುತ್ತಿಲ್ಲ. ಕಡತ ವಿಲೇವಾರಿ ಆಗುತ್ತಿಲ್ಲವೆಂದು ಗಂಭೀರ ಆರೋಪ ಮಾಡಿದರು. ಯುವಕನೊಬ್ಬ ತನ್ನ ಮೊಬೈಲ್ನಲ್ಲಿ ಸಿಬ್ಬಂದಿ ಅವ್ಯವಹಾರದ ವಿಡಿಯೋ ತುಣುಕು ಶಾಸಕರಿಗೆ ತೋರಿಸಿದ. ಇದರಿಂದ ಕೆರಳಿದ ಚವ್ಹಾಣ್, ವಿಡಿಯೋ ಪರಿಶೀಲಿಸಿ ಅವ್ಯವಹಾರದಲ್ಲಿ ತೊಡಗಿರುವ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ದುಡ್ಡಿಲ್ಲದೆ ಯಾವ ಕೆಲಸ ಆಗುತ್ತಿಲಲ್ಲೆಂದು ಜನತೆ ದೂರು ಸಲ್ಲಿಸುತ್ತಿದ್ದಾರೆ. ಪ್ರತಿದಿನ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಈ ಕಚೇರಿ ಸಮಸ್ಯೆಗಳು ಪ್ರತಿದಿನ ಹೆಚ್ಚುತ್ತಲೇ ಇವೆ. ತಕ್ಷಣ ಉಪ ನೋಂದಣಾಧಿಕಾರಿ ಬದಲಿಸಿಸಬೇಕು ಹಾಗೂ ಕಚೇರಿ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ತಾಕೀತು ಮಾಡಿದರು.
ತಹಸಿಲ್ನ ವಿವಿಧ ವಿಭಾಗಗಳಲ್ಲಿ ಸಂಚರಿಸಿ ಏನು ಕೆಲಸ ಮಾಡುತ್ತೀರಿ?, ಪ್ರತಿದಿನ ಎಷ್ಟು ಅರ್ಜಿ ಬರುತ್ತವೆ? ಎಷ್ಟು ವಿಲೇವಾರಿ ಮಾಡುತ್ತೀರಿ ಎಂದೆಲ್ಲ ಪ್ರಶ್ನಿಸಿ ವಿವರಣೆ ಪಡೆದರು. ಕೆಲ ವಿಭಾಗಗಳಲ್ಲಿ ಸಿಬ್ಬಂದಿ ಗೈರಾಗಿರುವುದನ್ನು ಕಂಡು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಯೋಮೆಟ್ರಿಕ್ ಯಂತ್ರಗಳನ್ನು ಸರಿಪಡಿಸಬೇಕು. ಗೈರು ಮತ್ತು ಸಮಯಕ್ಕೆ ಆಗಮಿಸದವರಿಗೆ ನೋಟಿಸ್ ನೀಡುವುದರ ಜತೆಗೆ ಸಂಬಳ ಕಡಿತಗೊಳಿಸಬೇಕು. ಜನತೆಗೆ ಸ್ಪಂದಿಸದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.
ಕಚೇರಿಗೆ ಆಗಮಿಸಿದ ಸಾರ್ವಜನಿಕರನ್ನು ಮಾತನಾಡಿಸಿ ಯಾವ ಕೆಲಸಕ್ಕಾಗಿ ಬಂದಿದ್ದೀರಿ? ಅಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೆ? ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸುವ ಮೂಲಕ ತಹಸಿಲ್ ಸಿಬ್ಬಂದಿ ಕೆಲಸದ ಬಗ್ಗೆ ತಿಳಿದುಕೊಂಡರು.
ಕಚೇರಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಗೆ ಹೋದಾಗ ಕಡತಗಳು ಬೇಕಾಬಿಟ್ಟಿ ಇಡಲಾಗಿತ್ತು. ನಿರುಪಯುಕ್ತ ಸಾಮಗ್ರಿ ಮತ್ತು ಕಚೇರಿ ತುಂಬ ಧೂಳು ಆವರಿಸಿರುವುದನ್ನು ಕಂಡು ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ಮುಂದಿನ ಸಲ ಭೇಟಿ ನೀಡಿದಾಗ ಇದೇ ಪರಿಸ್ಥಿತಿಯಿದ್ದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕೆಲಸ ಆಗುವುದಿಲ್ಲವೆಂದರೆ ಸೂಕ್ತ ಕಾರಣ ನೀಡಿ ಕಡತ ವಿಲೇವಾರಿ ಮಾಡಬೇಕು. ಕೆಲಸಗಳು ಕಾಲಮಿತಿಯಲ್ಲಿ ಆಗಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಚೇರಿ ಆವರಣದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಕಡ್ಡಾಯ ಮಾಡಿಕೊಡಬೇಕೆಂದು ಸೂಚಿಸಿದರು.
ತಹಸಿಲ್ ಕಚೇರಿ ಬಗ್ಗೆ ಜನರಿಂದ ನಿರಂತರ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಸಾಕಷ್ಟು ಲೋಪಗಳು ಕಾಣಿಸಿವೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಗೃಹ ಇಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಬಗ್ಗೆ ಸಾಕಷ್ಟು ದೂರುಗಳಿವೆ. ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ್, ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ಸಂತೋಷ ಪೋಕಲವಾರ, ಜಗದೀಶ ಪಾಟೀಲ್, ಸಿದ್ರಾಮಪ್ಪ ನಿಡೋದೆ ಇತರರಿದ್ದರು.

ಕಚೇರಿ ಶುಚಿಗೊಳಿಸಲು ಗಡುವು
ಶಾಸಕ ಪ್ರಭು ಚವ್ಹಾಣ್ ತಹಸಿಲ್ ಕಚೇರಿ ಆವರಣದಲ್ಲಿ ಸಂಚರಿಸಿ ಸ್ವಚ್ಛತೆಯನ್ನು ಗಮನಿಸಿದರು. ಆವರಣದ ಎಲ್ಲೆಡೆ ಕಸಕಡ್ಡಿ, ಗಿಡ-ಗಂಟಿ ಬೆಳೆದಿರುವುದು ಕಾಣಿಸಿತು. ಕುಡಿಯುವ ನೀರಿನ ಯಂತ್ರ ಚಾಲ್ತಿಯಲ್ಲಿರಲಿಲ್ಲ. ಶೌಚಗೃಹ ಹಾಳಾಗಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇರುವುದನ್ನು ಕಂಡು ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೂಡಲೇ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ ಕಚೇರಿ ಆವರಣವನ್ನು 10 ದಿನದೊಳಗೆ ಶುಚಿಗೊಳಿಸಬೇಕು ಎಂದು ಗಡುವು ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net