

ಔರಾದ್: ಪಟ್ಟಣ ಸೇರಿದಂತೆ ತಾಲೂಕಿನ ಸಂತಪೂರ, ಜಂಬಗಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ, ವಸತಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ವಸತಿ ನಿಲಯದಲ್ಲಿ ಸಮರ್ಪಕವಾದ ಸೌಲಭ್ಯಗಳಿಲ್ಲ. ಕಳಪೆ ಅಡುಗೆಯಿಂದ ಮಕ್ಕಳು ಊಟ ಮಾಡುವುದಿಲ್ಲ. ಕಾವಲುಗಾರರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಸಿಬ್ಬಂದಿ ಸರಿಯಾಗಿ ಅಡುಗೆ ಮಾಡುತ್ತಿಲ್ಲ. ವಾರ್ಡನ್ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಿಚ್ಚಿಟ್ಟರು.
ಮಕ್ಕಳು ವಸತಿಯಲ್ಲಿಯೇ ಶೌಚಗೃಹಕ್ಕೆ ಹೋಗಬೇಕು. ತೊಂದರೆ ಆಗದಂತೆ ತಾವುಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಹಾಸ್ಟಲ್ನಲ್ಲಿ ಸ್ವಚ್ಛತೆ ಇಲ್ಲದಿರುವದನ್ನು ಕಂಡ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಅವರು ವಾರ್ಡನ್ ಗಳಿಗೆ ತರಾಟೆ ತೆಗೆದುಕೊಂಡರು.
ವಸತಿ ನಿಲಯದಲ್ಲಿ ವಾಟರ್ ಫಿಲ್ಟರ್ ಇದ್ದರೂ ಶುದ್ಧ ನೀರು ಇಲ್ಲ ಎಂದು ವಿದ್ಯಾರ್ಥಿಗಳು ಗಮನಕ್ಕೆ ತಂದರು. ಇದರಿಂದ ವಾರ್ಡನ್ ಹಾಗೂ ಮೇಲಾಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೆಲಸ ಮಾಡಲು ಆಗದಿದ್ದರೆ ಮನೆಗೆ ಹೋಗಿ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಭೇಟಿ ನೀಡಿರುವ ಎಲ್ಲ ವಸತಿ ನಿಲಯ ಸೇರಿದಂತೆ ಆಸ್ಪತ್ರೆಯ ಬಗ್ಗೆ ಗೌರವಾನ್ವಿತ ಲೋಕಾಯುಕ್ತ ಅವರಿಗೆ ವರದಿ ಮಾಡಲಾಗುವುದು ಎಂದರು. ಸಿಬ್ಬಂದಿ ಕಿಶೋರ, ಹಾತಿಸಿಂಗ್ ಇತರರಿದ್ದರು.
ಸಂತಪುರ ಆಸ್ಪತ್ರೆ ಮೆಚ್ಚುಗೆ
ತಾಲೂಕಿನ ಸಂತಪೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಪ್ರದೀಪ ಕೊಳ್ಳಾ ಆಸ್ಪತ್ರೆ ಸುತ್ತಾಡಿ ಪರಿಶೀಲಿಸಿದರು. ಅಲ್ಲಿನ ಶುಚಿ ಹಾಗೂ ಕಡತಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಂತಪುರ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಕಾರ್ಯಕ್ಕೆ ಅಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದರು.
ಜಂಬಗಿ ಶಿಕ್ಷಕರ ಮೇಲೆ ಆಕ್ರೋಶ
ತಾಲೂಕಿನ ಜಂಬಗಿ ಸಕರ್ಾರಿ ಪ್ರೌಢಗೆ ಭೇಟಿ ನೀಡಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಮಕ್ಕಳ ಮೌಲ್ಯಮಾಪನ ಮಾಡಿದರು. ಈ ವೇಳೆ ಮಕ್ಕಳು ಕಲಿಕೆಯಿಂದ ತೀರ ಹಿಂದುಳಿದಿರುವದನ್ನು ಕಂಡು ಬಂತು. ಇದನ್ನು ಗಮನಿಸಿದ ಅವರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳು ಕಲಿಕೆಯಲ್ಲಿ ಅಭಿವೃದ್ಧಿಯಾಗಬೇಕು. ಇಲ್ಲವಾದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಕೌಡಗಾಂವ ಪ್ರೌಢ ಶಾಲೆಗೆ ಭೇಟಿ ನೀಡಿದ ಅಧಿಕಾರಿ, ಮಕ್ಕಳ ಕಲಿಕೆ ಗುಣಮಟ್ಟ ಕಂಡು ಶಾಲೆಯ ಮುಖ್ಯಗುರು ಬಾಲಿಕಾ ಸೇರಿದಂತೆ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.