

ಭಾಲ್ಕಿ: ಗಡಿ ಜಿಲ್ಲೆ ಬೀದರ್ನಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಅವರಿಂದ ಸನ್ಮಾನ ಮತ್ತು ಆಶೀರ್ವಾದ ಪಡೆದ ಅವರು, ಪೂಜ್ಯರು ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಮೂರ್ನಾಲ್ಕು ದಶಕಗಳಿಂದ ಪಟ್ಟದ್ದೇವರು ಬಡವರು, ನಿರ್ಗತಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲ್ಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಕಲಿತ ಮಕ್ಕಳಿಂದ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಡಾಕ್ಟರ್, ಇಂಜಿನಿಯರ್, ಸಂಶೋಧಕರಾಗಿ ಹೊರಹೊಮ್ಮುತ್ತಿರುವುದು ಸಂತಸ ತರಿಸಿದೆ ಎಂದರು.
ಪೂಜ್ಯರ ವಿಶಿಷ್ಟ ಸೇವೆ ಗಮನಿಸಿ ಬಂಗಾರಪ್ಪ ಸೇವಾ ಪ್ರತಿಷ್ಠಾನದಿಂದ ಬಂಗಾರ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ. ಗಡಿಯಲ್ಲಿನ ಪಟ್ಟದ್ದೇವರ ಶ್ರೀಮಠ, ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲು ಉತ್ಸುಕನಾಗಿದ್ದು, ಶೀಘ್ರ ದಿನಾಂಕ ನಿಗದಿಪಡಿಸಿ ಪೂಜ್ಯರ ಆಶೀರ್ವಾದ ಪಡೆಯುವುದಾಗಿ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇದ್ದರು.