

ಬೀದರ್: ಐದು ವರ್ಷದಿಂದ ಸಮಾನ ಮನಸ್ಕ ಗೆಳೆಯರು ಸೇರಿ ನಿತ್ಯ ಯೋಗ ಮಾಡುತ್ತಿರುವುದು ಮಾದರಿ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ಹಳೆಯ ನಾವದಗೇರಿ ಬಳಿಯ ಹೆಬ್ಬಾಳೆ ತೋಟದ ಮನೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಉದ್ಘಾಟಿಸಿದ ಅವರು, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ನಿತ್ಯವೂ ಮಾಡಬೇಕು. ಈ ಕಾರ್ಯವನ್ನು ಚಂದ್ರಶೇಖರ ಹೆಬ್ಬಾಳೆ ಮತ್ತು ಗೆಳೆಯರು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಯೋಗ ಕೇವಲ ವ್ಯಾಯಾಮ ಅಲ್ಲ, ಮನುಷ್ಯನ ಆಂತರಿಕ ಶಕ್ತಿ ಜಾಗೃತಗೊಳಿಸುವ ಶ್ರೇಷ್ಠ ಸಾಧನ. ಬುದ್ಧಿ, ಮನಸ್ಸು ಮತ್ತು ಶರೀರ ಒಗ್ಗೂಡಿಸಿ ಅದಮ್ಯ ಶಕ್ತಿ ತುಂಬುವ ಸರಳ ಮಾರ್ಗ. ಈ ಮೂರು ಅಂಗ ಒಗ್ಗೂಡಿದವರಿಂದ ಏನನ್ನಾದರೂ ಸಾಸಲು ಸಾಧ್ಯ. ವಿದ್ಯಾರ್ಥಿ ದಿಸೆಯಿಂದಲೇ ಯೋಗ ಅಳವಡಿಸಿಕೊಂಡರೆ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಸಾಮಥ್ರ್ಯ ಬಲವಾಗುತ್ತದೆ ಎಂದು ಹೇಳಿದರು.
ಆಯೋಜಕ ಚಂದ್ರಶೇಖರ ಹೆಬ್ಬಾಳೆ ಮಾತನಾಡಿ, ಉತ್ತಮ ಆಹಾರ ಸೇವನೆ ಜತೆಗೆ ಯೋಗ ಮಾಡುವುದರಿಂದ ಜೀವನದುದ್ದಕ್ಕೂ ಆರೋಗ್ಯವಾಗಿರಲು ಸಾಧ್ಯ. ಯೋಗದಿಂದ ಮಾನಸಿಕ ಒತ್ತಡ ಶಮನವಾಗಿ ದಿನದ 24 ಗಂಟೆ ಉತ್ಸಾಹದಿಂದ ಇರಬಹುದು. ಹೀಗಾಗಿ ಜಾತಿ, ಧರ್ಮ, ಪಂಥ ಎನ್ನದೆ ಎಲ್ಲರೂ ನಿತ್ಯ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀ ಪ್ರಭು ಸ್ವಾಮೀಜಿ, ಪೂಜ್ಯ ಉಷಾ ಬಹೆನ್ಜಿ, ಯೋಗ ಗುರು ವಿಜಯಕುಮಾರ ಬಾಬಣೆ, ಪ್ರಮುಖರಾದ ಡಾ.ಜಗನ್ನಾಥ ಹೆಬ್ಬಾಳೆ, ವಿಜಯಕುಮಾರ ಪಾಟೀಲ್ ಯರನಳ್ಳಿ, ಸುರೇಶ ಸ್ವಾಮಿ, ಮಲ್ಲಮ್ಮ ಹೆಬ್ಬಾಳೆ, ಮೀನಾಕ್ಷಿ ಇತರರಿದ್ದರು. ಜಯರಾಜ ಖಂಡ್ರೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಡಾ.ಬುಕ್ಕಾ ಮಲ್ಲಿಕಾರ್ಜುನ ವಂದಿಸಿದರು.
ಬದಲಾದ ಜೀವನ ಶೈಲಿ, ಆಹಾರ ಸಮಸ್ಯೆ, ಒತ್ತಡ ಮತ್ತಿತರ ಕಾರಣಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಂದು ಹಲವು ರೋಗ ವಕ್ಕರಿಸುತ್ತಿವೆ. ಆರೋಗ್ಯ ಸಂಪತ್ತು ಬೇಕಾದರೆ ಯೋಗವೊಂದೇ ಮಾರ್ಗ. ವಿದ್ಯಾರ್ಥಿಗಳು ಸಂಸ್ಕಾರ, ನೈತಿಕತೆ, ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಭಾರತದ ಇತಿಹಾಸ, ಪರಂಪರೆ, ಶ್ರೇಷ್ಠತೆ ತಿಳಿದುಕೊಳ್ಳಬೇಕು. ಇದು ಮಕ್ಕಳಲ್ಲಿ ಸಾಧನೆಗೆ ಶಕ್ತಿ, ಸ್ಫೂರ್ತಿ ತುಂಬುತ್ತದೆ.| ಜಯರಾಜ ಖಂಡ್ರೆಹಿರಿಯ ಉದ್ಯಮಿ