ಬೀದರ್ ಅಭಿವೃದ್ಧಿಗೆ ಎಫ್ ಪಿಎಐ ಕೊಡುಗೆ ಅಪಾರ

FPAI
Published on

ಬೀದರ್: ಬೀದರ್ ಜಿಲ್ಲೆ ಅಭಿವೃದ್ಧಿಯಲ್ಲಿ ಎಫ್ ಪಿಎಐ ಕೊಡುಗೆ ಅಪಾರ ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ ಪಿಎಐ) ಅಧ್ಯಕ್ಷೆ ಡಾ.ರತ್ನಮಾಲಾ ದೇಸಾಯಿ ಹೇಳಿದರು.
ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಎಫ್ ಪಿಎಐ ಬೀದರ್ ಶಾಖೆ ಸುವರ್ಣ ಮಹೋತ್ಸವ ಉದ್ಘಾಟಿಸಿದ ಅವರು, ದೇಶದಲ್ಲೇ ಬೀದರ್ ಉತ್ತಮ ಶಾಖೆಯಾಗಿ ಹೊರಹೊಮ್ಮಿದೆ. 50 ವರ್ಷಗಳಲ್ಲಿ ನಾನಾ ರೀತಿಯ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ಎಫ್ ಪಿಎಐ ಮಹಾ ನಿರ್ದೇಶಕಿ ಡಾ.ಕಲ್ಪನಾ ಆಪ್ಟೆ ಮಾತನಾಡಿ, ಬೀದರ್ ಶಾಖೆ ಪ್ರಾರಂಭದಿಂದಲೂ ಉತ್ತಮ ಸೇವೆ ನೀಡುತ್ತ ಬಂದಿದೆ. ಜತೆಗೆ ಪ್ರತಿ ಕಾರ್ಯಚಟುವಟಿಕೆ ತುಂಬ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಉಪ ಮಹಾ ನಿರ್ದೇಶಕಿ ಅಮಿತಾ ಧಾನು ಮಾತನಾಡಿ, ಎಫ್ ಪಿಎಐ ಬೀದರ್ ಶಾಖೆಯ ಎಲ್ಲ ಪದಾಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಇವರ ಕಾರ್ಯ ಹೀಗೆ ಮುಂದುವರಿಯಲಿ ಎಂದರು.
ಶಾಖೆಯ ಮಾಜಿ ಅಧ್ಯಕ್ಷ ಪ್ರೊ.ಪೂರ್ಣಿಮಾ ಜಾಜ್೯, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದಿಲೀಪ ಡೊಂಗ್ರೆ ಮಾತನಾಡಿದರು. ಶಾಖೆ ಅಧ್ಯಕ್ಷ ಡಾ.ನಾಗೇಶ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಜಯಶ್ರೀ ಬಶೆಟ್ಟಿ, ಡಾ.ವಿ.ವಿ. ತಡಪಳ್ಳಿಕರ್, ಡಾ.ಸುಭಾಷ ಬಶೆಟ್ಟಿ, ಡಾ.ಆರತಿ ರಘು, ಅಂಬುಜಾ ವಿಶ್ವಕರ್ಮ, ರೇಖಾ ಚಂದಾ, ಪದ್ಮಜಾ ವಿಶ್ವಕರ್ಮ, ಡಾ.ವಿಜಯ ಕೊಂಡಾ, ಮಲ್ಲಿಕಾರ್ಜುನ ಪಾಟೀಲ್, ಸುಬ್ರಹ್ಮಣ್ಯ ಪ್ರಭು, ಡಾ.ಎ.ಸಿ. ಲಲಿತಮ್ಮ ಇತರರಿದ್ದರು.
ಡಾ.ಸವಿತಾ ಚಾಕೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರಘು ಕೃಷ್ಣಮೂರ್ತಿ ನಿರೂಪಣೆ ಮಾಡಿದರು. ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ನಿವೃತ್ತ ಸಿಬ್ಬಂದಿಗೆ ಸನ್ಮಾನ ಹಾಗೂ ಸುವರ್ಣ ಮಹೋತ್ಸವ ನಿಮಿತ್ತ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

50 ವರ್ಷದಿಂದ ನಿರಂತರ ಸೇವೆ
ಎಫ್ ಪಿಎಐ ಬೀದರ್ ಶಾಖೆ 1973ರಲ್ಲಿ ಸ್ಥಾಪನೆಯಾಗಿದೆ. ಡಾ.ಕೆ.ಎಲ್. ಕೃಷ್ಣಮೂರ್ತಿ ಹಾಗೂ ಡಾ.ಎಸ್.ಎಸ್. ಸಿದ್ದಾರಡ್ಡಿ ನೇತೃತ್ವದಲ್ಲಿ ಶಾಖೆ ಪ್ರಾರಂಭವಾಗಿ ಕುಟುಂಬ ಯೋಜನೆ, ಸಂತಾನೋತ್ಪತ್ತಿ, ಆರೋಗ್ಯ ಸೇವೆ ಸೇರಿ ನಾನಾ ಕೆಲಸ ಮಾಡುತ್ತ ಬರುತ್ತಿದೆ. ಈ ಸಂಸ್ಥೆ 50 ವರ್ಷಗಳಿಂದ ನಿರಂತರ ಜಿಲ್ಲೆಯ ಎಲ್ಲ ವರ್ಗದ ಬಡವರಿಗಾಗಿ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ, ತಾಯಿ-ಮಗುವಿನ ಆರೋಗ್ಯ, ಕುಟುಂಬ ಯೋಜನೆ, ಸುರಕ್ಷಿತ ಗರ್ಭಪಾತ, ಸ್ತನ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್, ಸ್ಕ್ರೀನಿಂಗ್ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರು, ತಾಯಂದಿರು, ಹದಿಹರೆಯದ ಯುವಕ-ಯುವತಿಯರಿಗಾಗಿ ಅರಿವು ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಆರೋಗ್ಯ ಸೇವೆ ನೀಡುತ್ತಿದೆ ಎಂದು ಶಾಖೆ ಅಧ್ಯಕ್ಷ ನಾಗೇಶ ಪಾಟೀಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net