ಪ್ರಸಾದ ನಿಲಯ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

Shashikant Modi - Copy
Published on

ಬೀದರ್: ಇಲ್ಲಿಯ ನಂದಿ ಬಡಾವಣೆಯಲ್ಲಿ ಇರುವ ಶ್ರೀ ಸಿದ್ಧೇಶ್ವರ ಟ್ರಸ್ಟ್ ಸಂಚಾಲಿತ ಅಪ್ನಾ ಘರ್ ಪ್ರಸಾದ ನಿಲಯದಲ್ಲಿ ಉಚಿತ ಪ್ರವೇಶಕ್ಕಾಗಿ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಹಾಗೂ ವೃತ್ತಿ ಪರ ಕೊರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ 20 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ಶ್ರೀ ಸಿದ್ಧೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ತಿಳಿಸಿದ್ದಾರೆ.
ಅನಾಥ, ನಿರ್ಗತಿಕ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಪ್ರಸಾದ ನಿಲಯದಲ್ಲಿ ಉಚಿತ ಪ್ರವೇಶ ಒದಗಿಸಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಲಯದಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಲು ಸಹ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
2012 ರಿಂದಲೂ ಅಪ್ನಾ ಘರ್ ಪ್ರಸಾದ ನಿಲಯ ನಡೆಸಿಕೊಂಡು ಬರಲಾಗುತ್ತಿದೆ. ಬಡತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ತಮ್ಮ ಮೆಡಿಕಲ್‍ನಿಂದ ಬರುವ ಆದಾಯದಲ್ಲಿ ಶೇ.10 ರಷ್ಟನ್ನು ಪ್ರಸಾದ ನಿಲಯಕ್ಕೆ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪ್ನಾ ಘರ್‍ನಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಲ್ಲಿದ್ದಾರೆ. ಕೆಲವರು ಸ್ವ ಉದ್ಯೋಗ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಿಲಯದ ಪ್ರವೇಶಕ್ಕಾಗಿ ಬೀದರ್‍ನ ರೈಲ್ವೆ ನಿಲ್ದಾಣ ಸಮೀಪದ ಎಲ್‍ಐಸಿ ಕಚೇರಿ ಹಿಂದುಗಡೆಯ ಮೋದಿ ಮೆಡಿಕಲ್‍ಗೆ ಭೇಟಿ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9448400365 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net